ಜಿಲ್ಲೆ

ಅವನೇ ಶ್ರೀಮನ್ನಾರಾಯಣ ಹಿಂದಿಯಲ್ಲಿ 17ರಿಂದ

ಹುಬ್ಬಳ್ಳಿ: ಅವನೇ ಶ್ರೀಮನ್ನಾರಾಯಣ ಚಲನಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ತಮಿಳು, ತೆಲುಗು ಹಾಗೂ ಮಲಿಯಾಳಿ ಭಾಷೆಯಲ್ಲಿಯೂ ಬಿಡುಗಡೆಗೊಂಡಿದೆ. ಜ. 17ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ಸಿನಿ ಪ್ರೇಮಿಗಳು ಹೊಸ ಪ್ರಯೋಗಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾರೆ. ಹೀಗಾಗಿ ಅಲ್ಲಿಯೂ ಉತ್ತಮ ಸ್ಪಂದನೆ ಇದೆ ಎಂದರು.

ಉಪೇಂದ್ರ ಅವರ ಎ ಚಿತ್ರದಂತೆ ಈ ಚಿತ್ರದ ತಿರುಳನ್ನು ಒಂದೇ ಬಾರಿಗೆ ತಿಳಿಯುವುದು ಕಷ್ಟ. ಹೀಗಾಗಿ 2- ಬಾರಿ ನೋಡಿದರೆ ಚಿತ್ರ ಅರ್ಥವಾಗುತ್ತದೆ. ಚಿತ್ರವನ್ನು ಎಷ್ಟು ಬಾರಿ ನೋಡಿದರೂ ಬೇಸರ ಆಗುವುದಿಲ್ಲ. ಈ ಚಿತ್ರಕ್ಕೂ ಪೈರಸಿ ಕಾಟ ಎದುರಾಗಿದೆ. ಆದರೆ, ಈ ಕಾಟ ತಡೆಯುವುದಕ್ಕಾಗಿಯೇ ಐಟಿ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ತಾವು ನಿರ್ದೇಶಿಸಲಿರುವ ಪುಣ್ಯಕೋಟಿ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾಗಿ ಹೇಳಿದರು. ಅವನೇ ಶ್ರೀಮನ್ನಾರಾಯಣ ಚಿತ್ರ ಪ್ಯಾನ್​ಇಂಡಿಯಾಕ್ಕೆ ಹೋಗಿದೆ ಎಂದರು.

ಚಿತ್ರದ ನಿರ್ದೇಶಕ ಸಚಿನ್ ಮಾತನಾಡಿ, ಮೊದಲು 3ತಾಸು 06ನಿಮಿಷದ ‘ಅವನೇ ಶ್ರೀಮನ್ನಾರಾಯಣ’ ಚಲನಚಿತ್ರಕ್ಕೆ 15 ನಿಮಿಷದ ಕತ್ತರಿ ಪ್ರಯೋಗಿಸಲಾಗಿದೆ ಎಂದರು.

ಚಿತ್ರದ ಕ್ಲೈಮಾಕ್ಸ್ ಉದ್ದವಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿತ್ತು. ಒಂದಿಷ್ಟು ಕತ್ತರಿ ಪ್ರಯೋಗ ಮಾಡಬೇಕು ಹಾಗೂ ಯಾವುದೇ ದೃಶ್ಯ ಕತ್ತರಿಸಬಾರದೆಂಬ ಎರಡೂ ಅಭಿಪ್ರಾಯಗಳು ಕೇಳಿಬರುತ್ತಿದ್ದವು. ಚಿತ್ರದ ದೃಶ್ಯ ಒಂದಕ್ಕೊಂದು ಲಿಂಕ್ ಇದ್ದಿದ್ದರಿಂದ ದೃಶ್ಯ ಕಡಿತಗೊಳಿಸುವುದು ಕಷ್ಟವಾಗಿತ್ತು ಎಂದರು.

ಕೆಲ ಚಿತ್ರ ಮಂದಿರಗಳಲ್ಲಿ ಸೌಂಡ್ ಸಿಸ್ಟಮ್ ಸರಿ ಇರದ ಕಾರಣದಿಂದಲೂ ಚಿತ್ರ ಬೇಸರ ಮೂಡಿಸಿರಬಹುದು. ಟಿವಿ ಹಾಗೂ ಆನ್​ಲೈನ್​ಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಪೂರ್ಣಪ್ರಮಾಣದ ಚಿತ್ರ ಪ್ರಸಾರ ಮಾಡಲಾಗುವುದು ಎಂದು ನಟ ರಕ್ಷಿತ್ ಶೆಟ್ಟಿ ತಿಳಿಸಿದರು. ಸಹ ನಟರಾದ ಪ್ರಮೋದ ಶೆಟ್ಟಿ, ಬಾಲಾಜಿ ಮನೋಹರ ಉಪಸ್ಥಿತರಿದ್ದರು.

ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ

ಧಾರವಾಡ: ಅವನೇ ಶ್ರೀಮನ್ನಾರಾಯಣ ಚಿತ್ರದ ನಾಯಕ ಮತ್ತು ಚಿತ್ರತಂಡ ಇಲ್ಲಿನ ಶ್ರೀನಿವಾಸ ಚಿತ್ರ ಮಂದಿರಕ್ಕೆ ಭಾನುವಾರ ಭೇಟಿ ನೀಡಿತು.ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ತಂಡ ಚಿತ್ರದ ಪ್ರಥಮಾರ್ಧ ಮುಗಿಯುತ್ತಿದ್ದಂತೆ ಚಿತ್ರಮಂದಿರ ಪ್ರವೇಶಿಸಿ ಪ್ರೇಕ್ಷಕರೊಂದಿಗೆ ಕೆಲ ಹೊತ್ತು ಕಳೆದರು. ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಅವರು ಆಗಮಿಸುತ್ತಿದ್ದಂತೆ ಕೇಕೆ ಹಾಕಿದ ಪ್ರೇಕ್ಷಕರು ತಮ್ಮ ನೆಚ್ಚಿನ ನಾಯಕನನ್ನು ಕಂಡು ಸಂತಸಪಟ್ಟರು. ನಾಯಕ ವೇದಿಕೆ ಏರುತ್ತಿದ್ದಂತೆ ಪ್ರೇಕ್ಷಕರೂ ವೇದಿಕೆ ಏರಿ ಸೆಲ್ಪಿ ತೆಗೆದುಕೊಂಡು ಖುಷಿ ಪಟ್ಟರು.

ಇದೇ ಸಂದರ್ಭದಲ್ಲಿ ಚಿತ್ರ ತಂಡಕ್ಕೆ ಸನ್ಮಾನಿಸಿದ ಚಿತ್ರಮಂದಿರದ ಮಾಲೀಕ ರಾಜು ಕುಲಕರ್ಣಿ ಅವರು ಧಾರವಾಡ ಫೇಡೆ ನೀಡಿದರು. ನಂತರ ರಕ್ಷಿತ್ ಶೆಟ್ಟಿ ಸಹ ವೇದಿಕೆ ಮೇಲಿದಂಲೇ ಪ್ರೇಕ್ಷಕರೊಂದಿಗೆ ಸೆಲ್ಪಿ ತೆಗೆದುಕೊಂಡರು.