ಚಿತ್ರದುರ್ಗ: ಎಸ್ಸಿ, ಎಸ್ಟಿ, ಒಬಿಸಿ, ಸಫಾಯಿ ಕರ್ಮಚಾರಿಗಳು ಸ್ವ-ಉದ್ಯೋಗ ಕೈಗೊಳ್ಳಬೇಕು ಎಂಬ ಉದ್ದೇಶಕ್ಕಾಗಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ಸಾಲಸೌಲಭ್ಯ ಕಲ್ಪಿಸಲು ಪಿಎಂ ಸೂರಜ್ ಪೋರ್ಟಲ್ ಯೋಜನೆ ಜಾರಿಯಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.
ಐಯುಡಿಪಿ ಲೇಔಟ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಿಎಂ ಸೂರಜ್ ಪೋರ್ಟಲ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು ವರ್ಚುವಲ್ ಮೂಲಕ ಯೋಜನೆ ಲೋಕಾರ್ಪಣೆಗೊಳಿಸಿದ್ದಾರೆ. ಅರ್ಜಿ ಸಲ್ಲಿಸಿ ಮಂಜೂರಾತಿ ಆದವರಿಗೆ ಕೆಲವೇ ಗಂಟೆಗಳಲ್ಲಿ ಡಿಬಿಟಿ ಆಧಾರದಲ್ಲಿ ಎಲ್ಲ ಬ್ಯಾಂಕ್‌ಗಳಿಗೂ ಹಣ ವರ್ಗಾವಣೆಯಾಗಲಿದೆ. ಆನಂತರ ಫಲಾನುಭವಿಗಳಿಗೆ ತಲುಪಲಿದೆ. ಇಂತಹ ಉನ್ನತ ಕಾರ್ಯಕ್ರಮ ನನ್ನ ಇಲಾಖೆಯಿಂದ ಆಗಿರುವ ಸಂತೋಷವಿದೆ ಎಂದರು.
ದೇಶದ ಶೇ 99ರಷ್ಟು ಬ್ಯಾಂಕ್‌ಗಳು ಎಸ್ಸಿ, ಎಸ್ಟಿ, ಇತರೆ ಅವಕಾಶ ವಂಚಿತ, ಶೋಷಿತರಿಗೆ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು, ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಇದು ಇಡೀ ರಾಷ್ಟ್ರವೇ ನಾಚಿಕೆ ಪಡುವ ಸಂಗತಿ ಎಂದು ಬೇಸರಿಸಿದರು.
ಭಾರತದಲ್ಲಿ ಈ ಹಿಂದೆ ಎಸ್ಸಿಗಳಿಗೆ ಅದರಲ್ಲೂ ದಲಿತರು ಒಂದೆರಡು ಸಾವಿರ ರೂ. ಸಾಲ ಪಡೆದವರಿಗೆ ಸಿಬಿಲ್ ಎಂಬ ಹೆಸರಿನಲ್ಲಿ ನಿಮ್ಮನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ಆದೇಶ ಮಾಡಲಾಗುತ್ತಿತ್ತು. ಅದಕ್ಕೆ ತಡೆ ಇದ್ದು, ಈಗ ಸಿಬಿಲ್ ಸ್ಕೋರ್ ಕೌಂಟ್‌ಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ 600ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಸಾಲ ನೀಡುತ್ತಿದ್ದೇವೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ನನ್ನ ಇಲಾಖೆ ವ್ಯಾಪ್ತಿಯ ನಿಗಮ ಮಂಡಳಿಗಳಿಗೆ 10 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬರುತ್ತಿದೆ. ಇದನ್ನು ಎಲ್ಲ ರಾಜ್ಯಗಳಿಗೂ ಬಡ್ಡಿ ಆಧಾರದಲ್ಲಿ ನೀಡಲಾಗುತ್ತಿದ್ದು, ನಾನು ಸಚಿವನಾದ ಬಳಿಕ ಶೇ 8ರಷ್ಟಿದ್ದ ಬಡ್ಡಿಯನ್ನು ಶೇ 4ಕ್ಕೆ ಇಳಿಸಲಾಗಿದೆ ಎಂದು ವಿವರಿಸಿದರು.
ಅರ್ಹ ಫಲಾನುಭವಿಗಳಿಗೆ ಕೇಂದ್ರದ ಯೋಜನೆಯಡಿ ಸಬ್ಸಿಡಿ ಕೂಡ ಇದೆ. ಸಾಲಸೌಲಭ್ಯ ಪಡೆದಲ್ಲಿ ಶೇ 5ರಷ್ಟು ಬಡ್ಡಿ ಇಲಾಖೆಯೇ ಭರಿಸಲಿದೆ. ಉದ್ದಿಮೆ ಸ್ಥಾಪಿಸಲು ಶೇ 3 ರ ಬಡ್ಡಿದರದಲ್ಲಿ ಬ್ಯಾಂಕ್ ಸಾಲಸೌಲಭ್ಯ ಲಭಿಸುವಂತಾಗಿದೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಎಲ್ಲ ಬಗೆಯ ಸಾಲಸೌಲಭ್ಯಗಳ ಮಾಹಿತಿ ಅಂಶವುಳ್ಳ ಬೋರ್ಡ್‌ಗಳನ್ನು ಎಲ್ಲ ಬ್ಯಾಂಕ್‌ಗಳಲ್ಲೂ ಕಡ್ಡಾಯವಾಗಿ ಹಾಕುವಂತೆ ಸೂಚಿಸಿದ್ದೇನೆ ಎಂದ ಅವರು, ಅರ್ಹರು ಪೋರ್ಟಲ್ ಮೂಲಕ ಉದ್ದಿಮೆ ಸ್ಥಾಪಿಸಲು ಹಾಗೂ ಆರ್ಥಿಕ ಚಟುವಟಿಕೆಗೆ ಸಾಲಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲ. ವಿನಾಕರಣ ಬ್ಯಾಂಕ್ ಅಧಿಕಾರಿಗಳು ಅರ್ಜಿ ತಿರಸ್ಕರಿಸಲು ಅವಕಾಶವಿಲ್ಲ ಎಂದು ಹೇಳಿದರು.
ಇದೇ ವೇಳೆ ಸೌಲಭ್ಯ ಪಡೆದ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಎನ್‌ಎಸ್‌ಸಿಎಫ್‌ಡಿಸಿ ಸಿಜಿಎಂ ರಮೇಶ್ ರಾವ್, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಜನರಲ್ ಮ್ಯಾನೇಜರ್ ಎಸ್.ಕೆ.ಭಾಗ್ಯರೇಖಾ, ಪ್ರಾದೇಶಿಕ ವ್ಯವಸ್ಥಾಪಕ ಎಂ.ಹರಿಪ್ರಸಾದ್, ಹಿರಿಯ ವ್ಯವಸ್ಥಾಪಕಿ ಎಂ.ನವ್ಯಾ ಹೆಗಡೆ, ಹಿರಿಯ ವ್ಯವಸ್ಥಾಪಕ ಮೊಸ್ಸೆ ಬಾಬು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ತಿಪ್ಪೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಇತರರಿದ್ದರು.