ಹುಬ್ಬಳ್ಳಿ: ಅಕ್ರಮವಾಗಿ ಮರಳು ತೆಗೆದು ಸಾಗಿಸುವ ಕಾರ್ಯ ಅಳ್ನಾವರ ಪಟ್ಟಣದ ಡವಗಿ ನಾಲೆಯಲ್ಲಿ ರಾಜಾರೋಷವಾಗಿ ಮುಂದುವರಿದಿದೆ.
ಅಕ್ರಮ ಮರಳು ಸಾಗಣೆಗೆ ಸರ್ಕಾರ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದರೂ ಕೆಲ ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ಸರ್ಕಾರದ ಪ್ರಯತ್ನ ಇದುವರೆಗೂ ಸಾಕಾರಗೊಂಡಿಲ್ಲ.
ಡವಗಿ ನಾಲಾದಿಂದ ತೆಗೆದ ಮರಳನ್ನು ನಾಲಾದ ಸುತ್ತಲೂ ಸಂಗ್ರಹಿಸಲಾಗಿದೆ. ಹಾಡಹಗಲೇ ಮರಳು ತೆಗೆಯಲಾಗುತ್ತದೆ. ಆದರೂ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಇದರತ್ತ ಗಮನ ಹರಿಸದೇ ಮೌನ ವಹಿಸಿರುವುದು ಶಂಕೆಗೆ ಕಾರಣವಾಗಿದೆ.
ಡವಗಿ ನಾಲಾದಿಂದ ಅನೇಕ ತಿಂಗಳುಗಳಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೂ ಇದನ್ನು ತಡೆಯುವ ಗೋಜಿಗೆ ಸಂಬಂಧಿಸಿದ ಇಲಾಖೆ ಹೋಗಿರಲಿಲ್ಲ. ಸೋಮವಾರದಂದು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಾಲಾ ಪ್ರದೇಶಕ್ಕೆ ತೆರಳಿ, ಅಕ್ರಮ ಮರಳು ತೆಗೆದ ಹಾಗೂ ಸಂಗ್ರಹಿಸಿದ್ದರ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲಾದಿಂದ ತೆಗೆದ ಮರಳು ಎಷ್ಟು ವೆಚ್ಚದ್ದಾಗಬಹುದೆಂಬುದರ ಬಗ್ಗೆ ಅಧಿಕಾರಿಗಳು ಲೆಕ್ಕಾಚಾರ ನಡೆಸಿದ್ದಾರೆ. ಈ ಅವ್ಯವಹಾರದಲ್ಲಿ ಭಾಗಿಯಾಗಿರುವವರ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಅಳ್ನಾವರದಿಂದ ಮರಳನ್ನು ಜೊಯಿಡಾ ತಾಲೂಕಿನ ರಾಮನಗರ, ಖಾನಾಪುರ ತಾಲೂಕಿನ ಲೋಂಡಾ ಸೇರಿ ಇತರೆಡೆಗೆ ಅಕ್ರಮವಾಗಿ ಸಾಗಿಸಲಾಗುತ್ತದೆ. ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿ ಮರಳು ಸಾಗಿಸುವ ಲಾರಿಗಳು ಪಟ್ಟಣಕ್ಕೆ ಆಗಮಿಸುತ್ತವೆ.
ಡವಗಿ ನಾಲಾದಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ವಿಷಯ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಹರದಾಡುತ್ತಿದೆ. ಆದರೆ, ಸ್ಥಳೀಯ ಅಧಿಕಾರಿಗಳಲ್ಲಿ ಮಾತ್ರ ಇದರ ಬಗ್ಗೆ ಮಾಹಿತಿಯೇ ಇಲ್ಲದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿರುವ ಡವಗಿ ನಾಲಾ, ಇದೀಗ ಅಕ್ರಮ ಮರಳು ಸಂಗ್ರಹಿಸಿ, ಮಾರಾಟ ಮಾಡುವವರ ತಾಣವಾಗಿದೆ. ನಾಲಾದಲ್ಲಿ ನೀರು ಬತ್ತಿರುವ ಅಥವಾ ಕಡಿಮೆ ಇರುವ ಸ್ಥಳದಲ್ಲಿ ಮರಳು ಸಂಗ್ರಹಿಸುವ ಕಾರ್ಯ ನಿರಂತರವಾಗಿ ನಡೆದಿದೆ.
ಡವಗಿ ನಾಲಾದಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ವಿಷಯ ಸೋಮವಾರವಷ್ಟೇ ಗೊತ್ತಾಗಿದೆ. ಇದುವರೆಗೆ ನನಗೆ ಈ ವಿಷಯವೇ ಗೊತ್ತಿರಲಿಲ್ಲ. ಈ ಹಿಂದೆ ಮರಳು ಸಾಗಿಸುತ್ತಿರುವ ಲಾರಿಗಳನ್ನು ಹಿಡಿದು ಪರಿಶೀಲಿಸಿದಾಗ ಅವರ ಬಳಿ ಪಾಸ್ ಇತ್ತು. ಅಕ್ರಮವಾಗಿ ಮರಳು ಸಾಗಿಸುವ ಲಾರಿಗಳು ಕಂಡು ಬಂದಿರಲಿಲ್ಲ.| ಅಮರೇಶ ಪಮ್ಮಾರ ಅಳ್ನಾವರ ತಹಸೀಲ್ದಾರ್