ಅಳ್ನಾವರ: ಪಟ್ಟಣದ ಜನರ ಬಹು ದಿನಗಳ ಬೇಡಿಕೆಯಾದ ಕಾಳಿ ನದಿ ನೀರಿನ ಯೋಜನೆಯ ಕಾಮಗಾರಿ ವೇಗದಲ್ಲಿ ಸಾಗುತ್ತಿದೆ ಎಂದು ಪ.ಪಂ. ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಹೇಳಿದರು.
ಜಾವಳ್ಳಿಯಲ್ಲಿ ನಡೆಯುತ್ತಿರುವ ನೀರು ಶುದ್ಧೀಕರಣ ಘಟಕದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ದಾಂಡೇಲಿಯಿಂದ ಅಳ್ನಾವರ ಪಟ್ಟಣದವರೆಗಿನ 36 ಕಿ.ಮೀ. ಪೈಪ್ಲೈನ್ ಜೋಡಣೆಯಲ್ಲಿ 14 ಕಿ.ಮೀ. ಮುಗಿದಿದೆ. ಮನೆ, ಮನೆಗೆ ಸಂಪರ್ಕ ನೀಡುವ ಪಟ್ಟಣದೊಳಗಿನ 35 ಕಿ.ಮೀ. ನಲ್ಲಿ 29 ಕಿ.ಮೀ. ಮುಗಿದಿದೆ. ವಿದ್ಯಾನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ವಣಗೊಂಡಿದ್ದು, ನೀರಿನ ಹೆಚ್ಚಳದಿಂದ ದಾಂಡೇಲಿಯಲ್ಲಿಯ ಜಾಕ್ವೆಲ್ ಕಾಮಗಾರಿ ಸ್ಥಗಿತಗೊಂಡಿದೆ. ನೀರು ಶುದ್ಧೀಕರಣ ಘಟಕದ ಕಾಮಗಾರಿ ನಡೆಯುತ್ತಿದೆ. ಯೋಜನೆಯ ಕಾಮಗಾರಿಗೆ ಪಟ್ಟಣ ಪಂಚಾಯಿತಿಯಿಂದ 2 ಕೋಟಿ 70 ಲಕ್ಷ ರೂ.ಗಳಲ್ಲಿ 40 ಲಕ್ಷ ರೂ.ಗಳನ್ನು ಭರಿಸಲಾಗಿದೆ. ಮುಂದಿನ ಬೇಸಿಗೆ ಸಮಯದಲ್ಲಿ ಪಟ್ಟಣಕ್ಕೆ ಕಾಳಿ ನದಿ ನೀರು ಹರಿಯುವ ನಿರೀಕ್ಷೆ ಇದೆ ಎಂದು ಹೇಳಿದರು.