ಜಿಲ್ಲೆ

ಅಳಿವಿನಂಚಿನಲ್ಲಿ ಆರ್​ಟಿಇ ಕಾಯ್ದೆ

ಸುಭಾಷ ಧೂಪದಹೊಂಡ ಕಾರವಾರ

ಶಿಕ್ಷಣ ಹಕ್ಕು (ಆರ್​ಟಿಐ) ಕಾಯ್ದೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಆರ್​ಟಿಇ ಅಡಿ ಲಭ್ಯವಿರುವ ಸೀಟುಗಳ ಸಂಖ್ಯೆಯೂ ಬೆರಳೆಣಿಕೆಯಷ್ಟಿದ್ದು, ಪಾಲಕರೂ ಈ ಸೀಟುಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.

ಬಡ ಮಕ್ಕಳು ಕೂಡ ಉತ್ತಮ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅನುವು ಮಾಡಿಕೊಡುವುದಕ್ಕಾಗಿ ಆರ್​ಟಿಇ ಕಾಯ್ದೆ ಜಾರಿಗೊಳಿಸಲಾಗಿತ್ತು. ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಪ್ರವೇಶವನ್ನು ಬಡಮಕ್ಕಳಿಗೆ ನೀಡಬೇಕು ಹಾಗೂ ಇವರ ಶುಲ್ಕವನ್ನು ಸರ್ಕಾರವೇ ಪಾವತಿಸಬೇಕು ಎಂಬ ನಿಯಮಾವಳಿಗಳು ಈ ಕಾಯ್ದೆಯಲ್ಲಿವೆ. ಆದರೆ, ರಾಜ್ಯ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತಂದು, ಸೀಟುಗಳ ಸಂಖ್ಯೆಯನ್ನು ಬಹುದೊಡ್ಡ ಪ್ರಮಾಣದಲ್ಲಿ ಕುಸಿಯುವಂತೆ ನೋಡಿಕೊಂಡಿದೆ.

ಹೀಗಾಗಿ, ಒಟ್ಟಾರೆ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈಗ ಆರ್​ಟಿಒ ಅಡಿಯಲ್ಲಿ ಬರೀ ಮೂರು ಶಾಲೆಗಳಲ್ಲಿ ಕೇವಲ 16 ಸೀಟುಗಳು ಲಭ್ಯ ಇವೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 118 ಸೀಟುಗಳು ಮಾತ್ರ ಲಭ್ಯ ಇವೆ. ಇರುವ ಕೆಲವೇ ಕೆಲವು ಸೀಟುಗಳೂ ಭರ್ತಿಯಾಗದೇ ಹಾಗೆಯೇ ಉಳಿಯುತ್ತಿವೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಮೊದಲ ಹಾಗೂ ಎರಡನೇ ಹಂತದ ಸೀಟು ಹಂಚಿಕೆ ಈಗಾಗಲೇ ಮುಕ್ತಾಯವಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 16ರಲ್ಲಿ ಎರಡು ಸೀಟುಗಳು ಮಾತ್ರ ಭರ್ತಿಯಾಗಿವೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 52 ಜನ ಸೀಟು ಆಯ್ದುಕೊಂಡಿದ್ದರು. ಇದರಲ್ಲಿ 44 ಜನ ದಾಖಲಾತಿ ಮಾಡಿಸಿದ್ದಾರೆ. ಎರಡನೇ ಹಂತದಲ್ಲಿ 5 ಜನ ಆಯ್ದು ಕೊಂಡಿದ್ದು ಎಲ್ಲರೂ ದಾಖಲಾತಿ ಮಾಡಿಸಿದ್ದಾರೆ. ಒಟ್ಟಾರೆ ಶಿರಸಿ ಜಿಲ್ಲೆಯಲ್ಲಿ 118 ರಲ್ಲಿ 49 ಸೀಟುಗಳು ಮಾತ್ರ ಭರ್ತಿಯಾಗಿವೆ.

ಖಾಸಗಿ ಶಾಲೆಗಳತ್ತ ಒಲವು ಕಡಿಮೆ: ಆರ್​ಟಿಇ ಅಡಿ ಈ ಮೊದಲು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 63 ಕ್ಕೂ ಅಧಿಕ ಶಾಲೆಗಳನ್ನು ಗುರುತಿಸಲಾಗಿತ್ತು. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 1466 ಸೀಟುಗಳಿದ್ದವು. ಆದರೆ, ಆರ್​ಟಿಇ ನಿಯಮಾವಳಿಗೆ ತಿದ್ದುಪಡಿ ಮಾಡಿ ಅಲ್ಪ ಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಲಾಯಿತು. ನಂತರ ನೆರೆ ಹೊರೆ ಶಾಲೆಗಳನ್ನು ಗುರುತಿಸುವ ಪದ್ಧತಿ ಜಾರಿಗೆ ಬಂತು. ಅದರ ಪ್ರಕಾರ ಸಮೀಪದಲ್ಲಿ ಸರ್ಕಾರಿ ಶಾಲೆಗಳಿದ್ದರೆ ಅಂಥ ಶಾಲೆಗಳಿಗೆ ಆರ್​ಟಿಇ ಸೀಟುಗಳ ಹಂಚಿಕೆ ಕೈಬಿಡಲಾಯಿತು. ಇದರಿಂದ ಜಿಲ್ಲೆಯಲ್ಲಿ ಆರ್​ಟಿಇ ಸೀಟುಗಳ ಪ್ರಮಾಣ ಕಳೆದ ಎರಡು ವರ್ಷಗಳಿಂದ ಗಣನೀಯವಾಗಿ ಇಳಿಕೆಯಾಗಿದೆ. ಈ ನಡುವೆ ಖಾಸಗಿ ಶಾಲೆಗಳಲ್ಲಿ ಸಿಗುವ ಆರ್​ಟಿಇ ಸೀಟುಗಳ ಬಗ್ಗೆ ಪಾಲಕರ ಆಸಕ್ತಿಯೂ ಕಡಿಮೆಯಾಗಿದೆ.

ಕರೊನಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಮಾಡಲು ಪಾಲಕರು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರಿಂದ ಆರ್​ಟಿಇ ಬಗ್ಗೆಯೂ ಪಾಲಕರು ಆಸಕ್ತಿ ತೋರುತ್ತಿಲ್ಲ. ಅದೂ ಖಾಸಗಿ ಶಾಲೆಗಳ ಬಗ್ಗೆ ಮತ್ತಷ್ಟು ಆಸಕ್ತಿ ಕಡಿಮೆಯಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 521 ವಿದ್ಯಾರ್ಥಿಗಳು ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 312 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಅನುದಾನವವೂ ಬಾಕಿ: ಆರ್​ಟಿಇ ಅಡಿ ಕಳೆದ ವರ್ಷ ಸೀಟು ನೀಡಿದ ಶಾಲೆಗಳಿಗೆ ಸರ್ಕಾರದಿಂದ ಬರುವ ಎರಡನೇ ಹಂತದ ಅನುದಾನ ಇದುವರೆಗೂ ಬಂದಿಲ್ಲ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 70 ಲಕ್ಷ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 21.37 ಲಕ್ಷ ರೂ. ಬಿಡುಗಡೆಗೆ ಬಾಕಿ ಇದೆ.

ನಮ್ಮ ಜಿಲ್ಲೆಗೆ ಆರ್​ಟಿಇ ಸೀಟುಗಳು ಸರ್ಕಾರದಿಂದ ನಿಗದಿಯಾಗಿವೆ. ಈಗಾಗಲೇ ಎರಡು ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯವಾಗಿದೆ. ಮೂರನೇ ಹಂತದ ಸೀಟು ಹಂಚಿಕೆ ಸರ್ಕಾರದ ವೇಳಾಪಟ್ಟಿಯಂತೆ ನಡೆಯಲಿದೆ. ಹರೀಶ ಗಾಂವಕರ್ಡಿ ಡಿಪಿಐ, ಕಾರವಾರ