ಜಿಲ್ಲೆ

ಅಲ್ಲಮಪ್ರಭುಗೆ ಅವರೇ ಸಾಟಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಆಧ್ಯಾತ್ಮಿಕ ಪರಂಪರೆಯಲ್ಲಿ ಅಲ್ಲಮಪ್ರಭುವನ್ನು ತಾತ್ವಿಕವಾಗಿ ಸರಿಗಟ್ಟಲು ಸಾಧ್ಯವಿಲ್ಲ, ಅವರಿಗೆ ಅವರೇ ಸಾಟಿ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.

ಎಸ್‌ಜೆಎಂ ನರ್ಸಿಂಗ್ ಕಾಲೇಜಿನ ಸಹಯೋಗದೊಂದಿಗೆ ಶ್ರೀ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೂನ್ಯಪೀಠ ಪರಂಪರೆ ಪ್ರಥಮಾಧ್ಯಕ್ಷ ಅಲ್ಲಮಪ್ರಭುದೇವರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಧ್ಯಾತ್ಮಿಕ ಪುರುಷರಾಗಿದ್ದ ಅಲ್ಲಮಪ್ರಭು ಯಾವುದನ್ನೂ ಪ್ರಶ್ನಿಸದೇ ಒಪ್ಪಿಕೊಳ್ಳುವಂತಹ ಜಾಯ ಮಾನದವರಾಗಿರಲಿಲ್ಲ. ಇಂಥ ಪ್ರಚಂಡ ಶಕ್ತಿ ಅನುಭವ ಮಂಟಪದ ಅಧ್ಯಕ್ಷರಾಗಿದ್ದು ಒಂದು ವಿಸ್ಮಯ ಎಂದರು.

ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಅಲ್ಲಮರದು ಅನುಭವ ಮಾರ್ಗ, ನಡೆ ಆಧ್ಯಾತ್ಮಿಕದ ಮೌಂಟ್ ಎವರೆಸ್ಟ್ ಇದ್ದಂತೆ. ಬೆಡಗಿನ, ಒಗಟಿನಂತಿರುವ ಅವರ ವಚನಗಳು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಎಂದರು.

ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.

ಗುರುಮಠಕಲ್ ಖಾಸಾ ಮುರುಘಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಅಕ್ಕಮಹಾದೇವಿ, ಅಲ್ಲಮರು ಈ ನಾಡಿನ ದೊಡ್ಡ ಆಧ್ಯಾತ್ಮ ಜೀವಿಗಳು. ಮಲೆನಾಡಿನ ಶಿವಮೊಗ್ಗದಿಂದ ಕಲ್ಯಾಣದವರೆಗೆ ಇಬ್ಬರು ಸಾಗಿ ಅಲ್ಲಿ ಮಹಾನ್ ಸಾಧನೆ ಮಾಡಿ, ಜೀವನ ಮೌಲ್ಯಗಳನ್ನು ನೀಡಿದವರು ಎಂದರು.

ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ, ಸಾಹಿತಿ ಎಚ್. ಆನಂದಕುಮಾರ್ ಮಾತನಾಡಿದರು. ಕೆಇಬಿ ಷಣ್ಮುಖಪ್ಪ, ಕೆ.ಎಂ. ವೀರೇಶ್, ಡಿ.ಎಸ್. ಸುರೇಶ್‌ಬಾಬು, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ರುದ್ರಮುನಿ, ಆನಂದ್, ವಿನಯ್, ನವೀನ್ ಸಜ್ಜನ್, ಮಾಲತೇಶ ಅರಸ್, ರವಿ ಅಂಬೇಕರ್ ಮತ್ತಿತರರು ಇದ್ದರು.

ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ, ಉಮೇಶ್ ಪತ್ತಾರ್, ಶಶಿಕಲಾ ಬಸವರಾಜ್, ಕರಿಬಸಪ್ಪ ಅವರು ವಚನ, ಭಾವಗೀತೆಗಳನ್ನು ಪ್ರಸ್ತುತ ಪಡಿಸಿದರು. ಎನ್. ಬಸವರಾಜ್ ಸ್ವಾಗತಿಸಿ, ಎಂ. ಮೌನೇಶ್ ವಂದಿಸಿದರು. ಡಾ. ನವೀನ್‌ಮಸ್ಕಲ್ ನಿರೂಪಿಸಿದರು.

(ಸಿಟಿಡಿ 31 ಮುರುಘಾ -ಅಲ್ಲಮ ಪ್ರಭು)

ಚಿತ್ರದುರ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಜಯಂತ್ಯುತ್ಸವದಲ್ಲಿ ಡಾ. ಶ್ರೀ ಬಸವಕುಮಾರ ಸ್ವಾಮೀಜಿ, ಡಾ. ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಜಿ.ಎಸ್. ಉಜ್ಜಿನಪ್ಪ, ಎಚ್. ಆನಂದ ಇತರರಿದ್ದರು.