ಜಿಲ್ಲೆ

ಅಲ್ಪಾವಧಿ ಬೆಳೆ ಸಾಲಕ್ಕಾಗಿ ರಾಜ್ಯಕ್ಕೆ 3415 ಕೋಟಿ ರೂ.ನಬಾರ್ಡ್ ನೆರವು

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಪ್ರಸಕ್ತ ಮುಂಗಾರು ಹಂಗಾಮಿಗೆ ಶೂನ್ಯಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂ.ವರೆಗೆ ಅಲ್ಪಾವಧಿ ಬೆಳೆ ಸಾಲ ವಿತರಣೆಗೆ ಪೂರಕವಾಗಿ ನಬಾರ್ಡ್ 3415 ಕೋಟಿ ರೂ.ಸಾಲವನ್ನು ರಾಜ್ಯಕ್ಕೆ ಮಂಜೂರು ಮಾಡಿದೆ.

ಸ್ವಂತ ಬಂಡವಾಳದಲ್ಲಿ ಕಳೆದ ಏಪ್ರಿಲ್‌ನಿಂದಲೇ ಕೃಷಿ ಅಲ್ಪಾವಧಿ ಬೆಳೆ ಸಾಲ ವಿತರಿಸುತ್ತಿರುವ ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಮುಂ ದೆ ಈ ಬಾರಿಯ ನಬಾರ್ಡ್ ನೆರವು ಎಷ್ಟೆಂಬ ಪ್ರಶ್ನೆ ಇತ್ತು. ಕೇಂದ್ರದ ಕೃಷಿ ಸಾಲ ವಿತರಣೆ ಯೋಜನೆಯಡಿ, ಕಳೆದ ಹಣಕಾಸು ಸಾಲಿಗೆ 3216.11 ಕೋಟಿ ರೂ.ಮಂಜೂರು ಮಾಡಿದ್ದ ನಬಾರ್ಡ್,ಪ್ರಸಕ್ತ ಸಾಲಿಗೆ ಶೇ.5.53 ಪ್ರಮಾಣದಲ್ಲಿ ಸಾಲದ ಮೊತ್ತವನ್ನು ಹೆಚ್ಚಿಸಿದೆ.

ಆದರೆ ಈ ಮೊತ್ತ ಹೇಳಿಕೊಳ್ಳುವಂಥ ಪ್ರಮಾಣದಲ್ಲಿ ಇಲ್ಲ. ಇದರಿಂದ ಶೂನ್ಯಬಡ್ಡಿ ದರದಲ್ಲಿ ಗರಿಷ್ಠ ಮೊತ್ತದವರಿಗೆ ಸಾಲ, ಹೆಚ್ಚುವರಿ ಸಾಲ ಕೊಡಲು ಹಾಗೂ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಕಷ್ಟವಾಗಲಿದೆ ಎಂಬ ಅಭಿಪ್ರಾಯ ಸಹಕಾರಿ ವಲಯದಲ್ಲಿ ವ್ಯಕ್ತವಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯಕ್ಕೆ 6300 ಕೋಟಿ ರೂ. ಸಾಲ ಕೊಟ್ಟಿದ್ದ ನಬಾರ್ಡ್ 2024-25ನೇ ಸಾಲಿನಲ್ಲಿ ನೆರವಿನ ಮೊತ್ತದಲ್ಲಿ ಶೇ.58ನ್ನು ಕಡಿತಗೊಳಿಸಿತ್ತು.

ಶೇ.4.50 ಬಡ್ಡಿ ದರದಲ್ಲಿ ನಬಾರ್ಡ್ ಸಾಲವನ್ನು ಶೇ.4.90 ದರದಲ್ಲಿ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುತ್ತದೆ. ನೆರವಿನ ಮೊತ್ತ ಕಡಿತಗೊಳಿಸಿದ್ದ ನಬಾರ್ಡ್ ನಡೆಗೆ ಕಳವಳ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರವೂ ನಬಾರ್ಡ್‌ನಿಂದ ಹೆಚ್ಚಿನ ಸಾಲಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿತ್ತು. ಹಾಲಿ ಹಣಕಾಸು ಸಾಲಿನಲ್ಲಿ ನಿಗದಿತ ಗುರಿಯೊಂದಿಗೆ ಬೆಳೆ ಸಾಲ ವಿತರಿಸುತ್ತಿರುವ ಆಯಾ ಡಿಸಿಸಿ ಬ್ಯಾಂಕ್‌ಗಳು ಆಗಸ್ಟ್-ಸೆಪ್ಟೆಂಬರ್‌ನ್ನು ಎದುರು ನೋಡುತ್ತಿದ್ದವು.

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ, ರಾಜ್ಯದಲ್ಲಿ 35 ಸಾವಿರ ರೈತರಿಗೆ 25 ಸಾವಿರ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಿಸುವ ಗುರಿ ಪೈಕಿ, 2600790 ರೈತರಿಗೆ 2313,40 ಕೋಟಿ ರೂ.ವಿತರಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಈ ಬಾರಿ ಇನ್ನೂ ಸಾಲ ವಿತರಣೆ ಗುರಿ ಫಿಕ್ಸ್ ಮಾಡಿಲ್ಲ.

ಶೇ.1 ರಿಂದ 1.50 ಬಡ್ಡಿ ಹೊರೆ

ವಿತರಿಸುವ ಕೃಷಿ ಸಾಲದ ಮೊತ್ತದಲ್ಲಿ ಶೇ.70 ನ್ನು ಬ್ಯಾಂಕ್‌ಗಳು ಸ್ವಂತ ಬಂಡವಾಳದಲ್ಲೇ ಭರಿಸುತ್ತಿವೆ. ಶೇ.4.90 ಬಡ್ಡಿ ದರದಲ್ಲಿ ಶೇ.30 ಸಾಲದ ಮೊತ್ತ ದೊರೆತರೂ, ಶೇ.8ಬಡ್ಡಿ ದರದೊಂದಿಗೆ ಸಂಗ್ರಹಿಸಿದ ಠೇವಣಿ ಹಣದಲ್ಲೇ ಶೇ.70 ಮೊತ್ತವನ್ನು ರೈತರಿಗೆ ವಿತರಿಸುತ್ತಿವೆ. ರಾಜ್ಯಸರ್ಕಾರ ಶೇ.6.50 ರಿಂದ 7 ಬಡ್ಡಿ ಸಬ್ಸಿಡಿಯನ್ನು ಬ್ಯಾಂಕ್‌ಗಳಿಗೆ ಮರು ಪಾವತಿಸುತ್ತಿದೆ. ಇದರಿಂದ ಶೇ.1 ರಿಂದ 1.50 ಬಡ್ಡಿ ನಷ್ಟ ಅನುಭವಿಸುವಂತಾಗಿದ್ದು, ಶೇ.8ಕ್ಕೆ ಬಡ್ಡಿ ಸಹಾಯಧನ ಹೆಚ್ಚಾಗಬೇಕೆಂಬ ಬೇಡಿಕೆ ಬ್ಯಾಂಕ್‌ಗಳ ವಲಯದಲ್ಲಿದೆ.

ಕೋಟ್.

ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸಿಲ್ಲವೆಂಬ ಕಾರಣಕ್ಕೆ ಬೀದರ್ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಈ ಎರಡೂ ಡಿಸಿಸಿ ಬ್ಯಾಂಕ್‌ಗಳನ್ನು ಹೊರತುಪಡಿಸಿ ಉಳಿದ ರಾಜ್ಯದ 19 ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳಿಗೆ ಈ ಬಾರಿಯ ನಬಾರ್ಡ್ ಮೊತ್ತ 3415 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಸಿ.ಎನ್.ದೇವರಾಜ್, ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಪೆಕ್ಸ್ ಬ್ಯಾಂಕ್, ಬೆಂಗಳೂರು.