ಕೋಲಾರ: ಅಲ್ಪಸಂಖ್ಯಾತರಿಗೆ ಕೌಶಲಾಧಾರಿತ ಶಿಕ್ಷಣ ನೀಡಿ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಜಿಲ್ಲೆಗೊಂದು ಐಟಿಐ ಕಾಲೇಜು ಹಾಗೂ ವಿಭಾಗಕ್ಕೊಂದು ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಜವಳಿ, ಕೈಮಗ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಬಾಳಾಸಾಹೇಬ ಪಾಟೀಲ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಇಲಾಖಾ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್ ಮೂಲಕ ಫಿಟ್ಟರ್, ವೆಲ್ಡರ್, ವೈರ್‌ಮನ್ ಉದ್ಯೋಗಕ್ಕೆ ಅಗತ್ಯ ಕೌಶಲ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಮುರಾರ್ಜಿ ದೇಸಾಯಿ, ಮೌಲಾನಾ ಅಜಾದ್ ವಸತಿ ಶಾಲೆಗಳಲ್ಲಿ ಪ್ರಚಾರದ ಕೊರತೆಯಿಂದ ದಾಖಲಾತಿ ಕಡಿಮೆಯಾಗಿದ್ದು, ಹಳ್ಳಿಗಳಿಗೂ ಹೋಗಿ ಪ್ರಚಾರ ಮಾಡಿ ಶೇ.100 ಗುರಿ ಸಾಧಿಸಲು ಸೂಚಿಸಲಾಗಿದೆ ಎಂದರು.
ನೇಕಾರರ ಹಿತಕ್ಕೆ ಬದ್ಧ: ರಾಜ್ಯ ಸರ್ಕಾರ ನೇಕಾರರ ಹಿತ ರಕ್ಷಣೆಗೆ ಬದ್ಧವಾಗಿದೆ. ಈಗಾಗಲೆ ಮನ್ನಾ ಸೌಲಭ್ಯ, ಆರ್ಥಿಕ ನೆರವು ನೀಡಿದೆ. ಇದರ ನಡುವೆಯೂ ರಾಜ್ಯದಲ್ಲಿ ನಾಲ್ವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಷಾದಕರ. ಆ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು. ಜಿಲ್ಲೆಯಲ್ಲಿ ಜವಳಿ ಪಾರ್ಕ್‌ಗಳ ಸ್ಥಾಪನೆಗೂ ಒತ್ತು ನೀಡಲಾಗುತ್ತಿದೆ, ಹೊಸ ಜವಳಿ ನೀತಿಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ಮಾಡಲು ಶೇ. 40-50 ಸಬ್ಸಿಡಿ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಸಲುವಾಗಿ ಮುಳಬಾಗಿಲಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಿಲು ಅಗತ್ಯ ಭೂಮಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಬಟ್ಟೆ ನೇಕಾರಿಕೆಯಲ್ಲಿ ಆನ್‌ಲೈನ್ ತರಬೇತಿ. ಜಿಲ್ಲೆಯಲ್ಲಿ ಬಟ್ಟೆ ಉದ್ಯಮ ಅಭಿವೃದ್ಧಿ ಪಡಿಸಲು ಔಟ್‌ಲೆಟ್ ನಿರ್ಮಿಸಲಾಗುವುದು ಎಂದರು. ಶಾಸಕಿ ರೂಪಕಲಾ ಶಶಿಧರ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಮೈಲಾರಪ್ಪ, ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕಿ ಎಂ. ಸೌಮ್ಯಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ದಾಖಲೆಯಿದ್ದರೆ ಬಿಡುಗಡೆ ಮಾಡಿ: ಬಿಜೆಪಿ ಸರ್ಕಾರದಲ್ಲಿ ಯಾವುದೇ ಡ್ರಗ್ಸ್ ಮಾಫಿಯಾ ನಡೆದಿಲ್ಲ, ಆರೋಪ ಮಾಡುವವರು ದಾಖಲೆ ಬಿಡುಗಡೆ ಮಾಡಲಿ ಎಂದು ಶ್ರೀಮಂತ ಪಾಟೀಲ್ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಸವಾಲು ಹಾಕಿದರು. ಆರೋಪ ಮಾಡುವುದೇ ವಿರೋಧ ಪಕ್ಷದವರ ಕೆಲಸ. ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರಲ್ಲಿ ಯಾವುದಾದರೂ ಬಲವಾದ ಸಾಕ್ಷ್ಯ ಇದ್ದರೆ ನೀಡಲಿ. ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬರುತ್ತಿರುವ ಡ್ರಗ್ಸ್ ದಂಧೆ ಕುರಿತು ತನಿಖಾ ಸಂಸ್ಥೆಗಳು ಸೂಕ್ತ ತನಿಖೆ ಕೈಗೊಳ್ಳುತ್ತವೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದರು.
ಆನ್‌ಲೈನ್ ಮದ್ಯಮಾರಾಟಕ್ಕೆ ಆತುರವಿಲ್ಲ: ಆನ್‌ಲೈನ್ ಮದ್ಯ ಮಾರಾಟದ ಕುರಿತು ತರಾತುರಿಯಲ್ಲಿ ತೀರ್ಮಾನ ಕೈಗೊಳ್ಳುವುದಿಲ್ಲ, ಸಾಧಕ ಬಾಧಕಗಳ ಕುರಿತು ಚರ್ಚಿಸಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇತರ ರಾಜ್ಯಗಳಲ್ಲಿ ಆನ್‌ಲೈನ್ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳ ತಂಡ ರಚಿಸಲಾಗಿದೆ. ಆನ್‌ಲೈನ್ ಮದ್ಯಮಾರಾಟದಿಂದ 18 ವರ್ಷದೊಳಗಿನ ಮಕ್ಕಳಿಗೆ, ಮಹಿಳೆಯರಿಗೆ ತೊಂದರೆಯಾಗಲಿದೆಯೇ ಎಂಬ ಸಾಧಕ ಬಾಧಕ ಪರಿಶೀಲಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಆನ್‌ಲೈನ್ ಮದ್ಯಮಾರಾಟ ನಗರಗಳಲ್ಲಿ ಮಾತ್ರ ನಡೆಯುತ್ತದೆ, ಹಳ್ಳಿಗಳಲ್ಲಿ ಸಾಧ್ಯವಿಲ್ಲ. ಖರೀದಿಗೆ ಸೇವಾ ಶುಲ್ಕ ಬೀಳುತ್ತದೆ. ಆನ್‌ಲೈನ್ ಮದ್ಯಮಾರಾಟದಿಂದ ಮಾರಾಟದಲ್ಲಿ ಹೆಚ್ಚಳ ಸಾಧ್ಯವಿಲ್ಲ. ಆನ್‌ಲೈನ್ ಮದ್ಯಮಾರಾಟಕ್ಕೆ ಬಾರ್‌ಗಳ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ ಎಂದರು. ಆಂಧ್ರ ಗಡಿಯಲ್ಲಿ ಹೊರಗಿನಿಂದ ಬಂದು ಮದ್ಯ ಖರೀದಿಸುವ ದಂಧೆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಪಿಎಸ್‌ಐ ಹುದ್ದೆಗಳಿಂದ ಸಿಐ ಹುದ್ದೆಗಳಿಗೆ ಭಡ್ತಿ ನೀಡುತ್ತಿದ್ದು, ಖಾಲಿ ಹುದ್ದೆ ಭರ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.