ಮೈಸೂರು: ಸರ್ವ ಜನಾಂಗದ ಶಾಂತಿಯ ತೋಟದಂತಿದ್ದ ಕರ್ನಾಟಕವನ್ನು ಬಜೆಟ್ ಮೂಲಕ ವಿಂಗಡಿಸಲಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಲಾಗಿದೆಂಬ ಕೂಗು ಎದ್ದಿದೆ. ಪರಸ್ಪರ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ಬಿಜೆಪಿಯವರು ಇದು ಸಾಬರ ಬಜೆಟ್, ಮುಲ್ಲಾ ಬಜೆಟ್ ಎನ್ನುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯವನ್ನು ಸಿದ್ದರಾಮಯ್ಯ ಕದಡುತ್ತಿದ್ದು, ಪ್ರತ್ಯೇಕತಾವಾದಕ್ಕೆ ನಾಂದಿ ಹಾಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಸ್ಟಾೃಂಪ್‌ಪೇಪರ್ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಮದ್ಯದ ದರವನ್ನೂ ಏರಿಕೆ ಮಾಡಲಾಗಿದೆ. ಜನರಿಗೆ ಹೆಂಡ ಸಾರಾಯಿ ಕುಡಿಸಿ ರಾಜ್ಯದ ಬೊಕ್ಕಸ ತುಂಬಿಸಿಕೊಂಡು ಇಡೀ ಸಮಾಜವನ್ನು ಹಾಳು ಮಾಡುತ್ತಿದ್ದಾರೆ.
ಬಜೆಟ್‌ಗೂ ಮೊದಲೇ ಎಲ್ಲ ಬೆಲೆಗಳನ್ನು ಹೆಚ್ಚು ಮಾಡಿದ್ದ ಸರ್ಕಾರ ಇದೀಗ ಬಜೆಟ್ ಮಂಡನೆ ವೇಳೆಯೂ ಬೆಲೆ ಹೆಚ್ಚಳ ಮಾಡಿದೆ. ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಾರಿಯ ರಾಜ್ಯ ಬಜೆಟ್ ಕಟ್ ಆ್ಯಂಡ್ ಪೇಸ್ಟ್‌ನಂತಿದೆ. ರಾಹುಕಾಲ ಆರಂಭಕ್ಕೆ ಕೆಲವೇ ನಿಮಿಷ ಇದ್ದಾಗ ಬಜೆಟ್ ಮಂಡನೆ ಆರಂಭಿಸಿದರು. ಸಿದ್ದರಾಮಯ್ಯ ಹೇಳುವುದು ಒಂದು, ಮಾಡುವುದು ಇನ್ನೊಂದು. ಬಜೆಟ್ ಪುಸ್ತಕದ ಗಾತ್ರ ಮಾತ್ರ ದಪ್ಪವಾಗಿದೆಯಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ಕೆಲವು ಯೋಜನೆಗಳನ್ನು ಕೂಡ ರಾಜ್ಯ ಬಜೆಟ್‌ನಲ್ಲಿ ಸೇರಿಸಲಾಗಿದೆ. ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಮೊದಲು ಅವಕಾಶ ಮಾಡಿಕೊಟ್ಟಿದ್ದು ಎಚ್.ಡಿ.ದೇವೇಗೌಡರು. ಆದರೆ ಬಜೆಟ್ ಓದುವಾಗ ಅವರನ್ನು ನೆನೆಸಿಕೊಳ್ಳಬೇಕಿತ್ತು. ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ ಎಂದು ಟೀಕಿಸಿದರು.
ತವರು ಜಿಲ್ಲೆ ಮೈಸೂರಿಗೆ ಹೇಳಿಕೊಳ್ಳುವಂತಹ ಕೊಡುಗೆಯನ್ನು ಕೊಟ್ಟಿಲ್ಲ. ಬಜೆಟ್‌ನಲ್ಲಿ ಈ ಹಿಂದೆ ಹೇಳಿದ್ದನ್ನೇ ಈಗಲೂ ಹೇಳಿದ್ದೀರಿ ಎಂದು ಕುಟುಕಿದರು.
ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡಲು ಆರಂಭಿಸಿದ್ದೇ ಬಿಜೆಪಿಯವರು. ಅದನ್ನು ಸಿಎಂ ಸಿದ್ದರಾಮಯ್ಯ ಮತ್ತಷ್ಟು ಹಾಳು ಮಾಡಿದ್ದಾರೆ. ಜನರಿಗೆ ಅಗತ್ಯವಿರುವುದನ್ನು ಕೊಡುತ್ತಿಲ್ಲ. ಸಿದ್ದರಾಮಯ್ಯ ಬರೀ ಬೊಗಳೆ ಬಿಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಹರಿಕಾರ ಅಂತಾರೆ, ಬರೀ ಬಾಯಲ್ಲಿ ಅಹಿಂದ ಅಷ್ಟೆ. ರಾಜ್ಯ ಬಜೆಟ್ ಕಾಂಗ್ರೆಸ್ ಪರಂಪರೆಗೇ ವಿರುದ್ಧವಾಗಿದೆ ಎಂದು ಟೀಕಿಸಿದರು.
ಅಧಿಕಾರ ಅವರ ಅಪ್ಪನ ಮನೆ ಆಸ್ತಿಯಲ್ಲ
ಸಿಎಂ ಅವರ ಕೆಲವು ಆಪ್ತರೇ ಸಿದ್ದರಾಮಯ್ಯ ಅವರ ಕೊನೇ ಬಜೆಟ್ ಎಂದು ಹೇಳುತ್ತಿದ್ದಾರೆ. ತಲಾ 30 ತಿಂಗಳಿಗೆ ಅಧಿಕಾರ ಹಂಚಿಕೆ ಸಂಬಂಧ ಮಾತುಕತೆಯಾಗಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಟ್ಟಿದವರು.
ಅವರು ಕಟ್ಟಿದ್ದ ಮನೆಗೆ ಬಂದು ಸೇರಿಕೊಂಡವರು ಸಿದ್ದರಾಮಯ್ಯ. ಅಧಿಕಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಅಪ್ಪನ ಮನೆ ಆಸ್ತಿಯಲ್ಲ. ಅಧಿಕಾರ ಕಾಂಗ್ರೆಸ್ ಪಾರ್ಟಿ ಮತ್ತು ಜನರ ಆಸ್ತಿ. ಹೈಕಮಾಂಡ್ ಹೇಳಿದರೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲೇಬೇಕು ಎಂದು ಎಚ್ವಿ ಗುಡುಗಿದರು.