ಜಿಲ್ಲೆ

ಅಲೆಮಾರಿಗಳು ಮಕ್ಕಳಿಗೆ ವಿದ್ಯೆ ಕೊಡಿಸಿ

ಚನ್ನಬಸಯ್ಯ ಗುರುವಿನ

ಯಾದಗಿರಿ: ಅಲೆಮಾರಿ ನಿವಾಸಿಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ನಗರಸಭೆ ನೂತನ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.

ನಗರದ ಹೊಸಳ್ಳಿ ರೈಲ್ವೆ ಕ್ರಾಸ್ ರಸ್ತೆ ಬಳಿ ಇರುವ ಅಲೆಮಾರಿ, ಬೇಡ ಬುಡಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣದಿಂದಲೇ ಮಾನವ ಅಭಿವೃದ್ಧಿ ಸಾಧ್ಯ. ನಿಮ್ಮ ಮಕ್ಕಳು ಬೇರೆಯವರ ಮಕ್ಕಳಂತೆ ಉನ್ನತ ವ್ಯಾಸಂಗ ಮಾಡಿ ಸಮಾಜದಲ್ಲಿ ವಿವಿಧ ಹುದ್ದೆಗಳಲ್ಲಿ ಬಂದಾಗ ಮಾತ್ರ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು.

ಹೊಟ್ಟೆಪಾಡಿಗಾಗಿ ನೀವು ಕಾಯಕ ಮಾಡಲು ಹೋಗುತ್ತಿರಿ, ಆದರೆ ಜತೆಗೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗದೆ ಅವರಿಗೆ ಶಾಲೆಗೆ ಸೇರಿಸಿ. ಅಂದಾಗಲೇ ಎಲ್ಲ ರೀತಿಯಿಂದಲ್ಲೂ ಸಮಾಜದಲ್ಲಿ ಮೇಲೆ ಬರಲು ಸಾಧ್ಯವಾಗಲಿದೆ ಎಂದು ಕಿವಿ ಮಾತು ಹೇಳಿದರು.

ನಗರದಲ್ಲಿ ವಾಸ ಮಾಡುತ್ತಿರುವ ಅಲೆಮಾರಿಗಳು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನದ ಜತೆಗೆ ವಿದ್ಯುತ್, ಕುಡಿವ ನೀರು, ಶೌಚಗೃಹ ವ್ಯವಸ್ಥೆ ಮಾಡಲಾಗುವುದು ಎಂದರು. ಸಮಿತಿ ಅಧ್ಯಕ್ಷ ಆಂಜನೇಯ ಅನಪುರ ಅವರನ್ನು ಸನ್ಮಾನಿಸಿ ಮನವಿ ಸಲ್ಲಿಸಿದರು.

ಚಿನ್ನ ಜಮ್ಮಣ್ಣ, ಸಹದೇವ, ರಮೇಶ, ದಾವೇಶ, ಜಯಪ್ಪ, ರಾಜು, ಚಿನ್ನಾ, ಡಿ. ರಾಜು, ಎ.ಬಾಬು, ಮೋಷಾ, ಡಿ. ಬಾಬು, ದೇವರಾಜು, ಜಯಲಕ್ಷಿö್ಮÃ, ಶಾರದಮ್ಮ ಇತರರಿದ್ದರು.