ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಪದಾಧಿಕಾರಿಗಳು ಇಲ್ಲಿಯ ನೌಬಾದ್ ಆಟೊನಗರ ಬಳಿ ಅಲೆಮಾರಿಗಳೊಂದಿಗೆ ದೀಪಾವಳಿ ಆಚರಿಸಿ ಗಮನ ಸೆಳೆದರು.
ಕ್ಲಬ್ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ.ಕಪಿಲ್ ಪಾಟೀಲ್, ಖಜಾಂಚಿ ಡಾ. ರಿತೇಶ ಸುಲೆಗಾಂವ್, ಸದಸ್ಯ ರಿಷಿಕೇಶ ಪಾಟೀಲ್ ಅವರು ಅಲೆಮಾರಿ ಕುಟುಂಬಗಳ ಸದಸ್ಯರ ಜತೆಗೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲೆಮಾರಿಗಳಿಗೆ ದೀಪಾವಳಿ ಉಡುಗೊರೆಯಾಗಿ ಸಿಹಿ ಹಾಗೂ ಹಣ್ಣು ಹಂಪಲು ವಿತರಿಸಿದರು. ಮಕ್ಕಳಿಗೆ ಬ್ಯಾಟ್, ಬಾಲ್ ಮತ್ತಿತರ ಆಟದ ಸಾಮಗ್ರಿಗಳನ್ನು ಸಹ ನೀಡಿ ಖುಷ್ ಮಾಡಿದರು.
ಅಲೆಮಾರಿಗಳ ಮೊಗದಲ್ಲಿ ಸಂತಸ ಅರಳಿಸಲು ಅವರೊಂದಿಗೆ ಹಬ್ಬ ಆಚರಿಸಲಾಗಿದೆ. ಅನಕ್ಷರಸ್ಥರು, ಬಡವರು, ಶೋಷಿತರ ಏಳ್ಗೆಗೆ ರೋಟರಿ ಕ್ಲಬ್ ಶ್ರಮಿಸುತ್ತಿದೆ. ಸಾಮಾಜಿಕ ಚಟುವಟಿಕೆ ನಿರಂತರ ಮುಂದುವರಿಸಲಿದೆ ಎಂದು ಸೂರ್ಯಕಾಂತ ಹೇಳಿದರು.
ರೋಟರಿ ಕ್ಲಬ್ ಸದಸ್ಯರು ನಮ್ಮೊಂದಿಗೆ ಹಬ್ಬ ಆಚರಿಸಿದ್ದರಿಂದ ಖುಷಿ ಇಮ್ಮಡಿಗೊಂಡಿದೆ. ಸಂಘ ಸಂಸ್ಥೆಗಳು ಬಡವರೊಂದಿಗೆ ಇವೆ ಎನ್ನುವ ಆತ್ಮವಿಶ್ವಾಸ ಮೂಡಿದೆ ಎಂದು ಅಲೆಮಾರಿ ಜನಾಂಗದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.