ಜಿಲ್ಲೆ

ಅಲೆಮಾರಿಗಳ ಅನ್ನ ಕಿತ್ತುಕೊಂಡ ಜನತಾಕರ್ಫ್ಯೂ ; ಜಿಲ್ಲೆಯೆಲ್ಲೆಡೆ ನೆರವಿಗೆ ಮೊರೆ ; 2ನೇ ಅಲೆಯಲ್ಲಿ ದಾನಿಗಳೂ ಇಲ್ಲ

ತುಮಕೂರು: ಕರೊನಾ ಎರಡನೇ ಅಲೆ ತುಂಡರಿಸಲು ರಾಜ್ಯದೆಲ್ಲೆಡೆ ಜನತಾಕರ್ಫ್ಯೂ ಜಾರಿಯಲ್ಲಿದ್ದು ಬಹುತೇಕ ಬಡವರು ತುತ್ತು ಅನ್ನಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಳಾಸ ಕೂಡ ಇಲ್ಲದೆ, ಸರ್ಕಾರದ ದಾಖಲೆಗಳಲ್ಲಿಯೂ ಇಲ್ಲದ ಜಿಲ್ಲೆಯ 12 ಅಲೆಮಾರಿ ಸಮುದಾಯಗಳು ಊಟಕ್ಕೆ ಪರದಾಡುತ್ತಿವೆ.

ಸರ್ಕಾರ ಪಡಿತರ ಕಾರ್ಡ್ ಹೊಂದಿರುವ ಬಡವರಿಗೆ ಅಕ್ಕಿ ನೀಡಿ ಕೈತೊಳೆದುಕೊಂಡಿದೆ. ಆದರೆ, ಪಡಿತರ ಚೀಟಿ ಕೂಡ ಪಡೆಯಲು ಸಾಧ್ಯವಾಗದ ನೂರಾರು ಅಲೆಮಾರಿ ಕುಟುಂಬಗಳು ಜೀವನ ನಡೆಸಲು ಸಾಧ್ಯವಾಗದೆ ಹಸಿವಿನಿಂದ ಬಳಲುತ್ತಿವೆ. ಮತ ಪಟ್ಟಿಯಲ್ಲಿಯೂ ಹೆಸರಿಲ್ಲದ ಇವರ ಬಗ್ಗೆ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುವುದು ಕನಸಿನಮಾತು.

ಹಕ್ಕಿಪಿಕ್ಕಿಗಳು, ಸುಡುಗಾಡು ಸಿದ್ಧರು, ದಕ್ಕಲಿಗರು, ಕೊರಮ, ಕೊರಚ ಸೇರಿ ವಿವಿಧ ಅಲೆಮಾರಿ ಸಮುದಾಯದ ನೂರಾರು ಕುಟುಂಬಗಳು ಜಿಲ್ಲೆಯೆಲ್ಲೆಡೆ ನೆಲೆಸಿದ್ದು ಜೀವನ ನಿರ್ವಹಣೆಗೆ ಪರದಾಡುತ್ತಿವೆ. ತುಮಕೂರು ಹೊರವಲಯದ ಅಮರಾಪುರ, ಚಿಕ್ಕನಾಯಕನಹಳ್ಳಿ ಪಟ್ಟಣ, ಡಿಂಕನಹಳ್ಳಿ, ಹುಳಿಯಾರು ಶಂಕರನಗರ ಮತ್ತಿತರ ಕಡೆ ಅಲೆಮಾರಿಗಳಿದ್ದಾರೆ.

ತಲೆಕೂದಲು ಪಡೆದು ಹೇರ್‌ಪಿನ್, ಸೂಜಿ, ಅರಿಶಿಣ, ಕುಂಕುಮ ಮತ್ತಿತರ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಕ್ಷರದ ನಂಟಿಲ್ಲದ ಅಲೆಮಾರಿಗಳು ಇತ್ತೀಚೆಗೆ ಬಾಗಿಲಿಗೆ ಹಾಕುವ ತೋರಣದ ಮಾದರಿಯ ವಿವಿಧ ಗೃಹಾಲಂಕಾರ ವಸ್ತುಗಳನ್ನು ಮಾಡುವುದನ್ನು ಅಭ್ಯಾಸ ಮಾಡಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಅಲೆಮಾರಿ ಸಮುದಾಯ ಗೂಡುಬಿಟ್ಟು ಹೊರಬರಲು ಸಾಧ್ಯವಾಗಿಲ್ಲ, ಅಂದು ದುಡಿದು ಅಂದಿನ ಊಟ ಮಾಡುತ್ತಿದ್ದ ಇಂತಹ ನೂರಾರು ಕುಟುಂಬಗಳು ಒಪ್ಪತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಮಕ್ಕಳು, ವೃದ್ಧರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಜಿಲ್ಲಾಡಳಿತ ಊಟ, ಔಷಧದ ವ್ಯವಸ್ಥೆ ತುರ್ತಾಗಿ ಮಾಡಬೇಕಿದೆ.

26 ಹಳ್ಳಿಗಳಲ್ಲಿ 12 ಸಮುದಾಯಗಳು : ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬರೋಬ್ಬರಿ 26 ಗ್ರಾಮದಲ್ಲಿ ಪಿಂಜಾರ, ಕೊರಮ, ಕೊರಚ, ಹಂದಿಜೋಗಿ, ಸಿಳ್ಳೆಕ್ಯಾತ, ದೊಂಬಿದಾಸ, ಚನ್ನದಾಸ, ದೊಂಬರು, ಉಳುವ, ಕರಡಿಕುಂದಲ್, ಮಂಡೋರು, ಸಿಂದೊಳ್ಳಿ, ಗಂಡಿಚೌರ್ ಸೇರಿ ವಿವಿಧ 12ಕ್ಕೂ ಹೆಚ್ಚು ಅಲೆಮಾರಿ ಸಮುದಾಯಗಳು ನೆಲೆಕಂಡುಕೊಂಡು ಬದುಕು ಕಟ್ಟಿಕೊಳ್ಳುತ್ತಿವೆ. ಹನುಮಂತಪುರ, ಡಿಂಕನಹಳ್ಳಿ, ಹುಳಿಯಾರು, ಬೋರನಕಣಿವೆ, ಸಿಂಗದಹಳ್ಳಿ, ಚಿ.ನಾ.ಹಳ್ಳಿ, ಗಾಂಧಿನಗರ, ಬೇವಿನಹಳ್ಳಿ, ಬಡಕೆಗುಡ್ಲು, ಸೋರಲಮಾವು, ಕಾತ್ರಿಕೆಹಾಳ್ ಸೇರಿ ವಿವಿಧ ಗ್ರಾಮಗಳಲ್ಲಿ ನೆಲೆನಿಂತಿದ್ದಾರೆ. ತುಮಕೂರಿಗೆ ಕೂಗಳತೆ ದೂರದಲ್ಲಿರುವ ಅಮರಾಪುರದಲ್ಲಿಯೂ ಅಲೆಮಾರಿಗಳಿಗೆ ತುರ್ತಾಗಿ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಬೇಕಿದೆ.

ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಐಸ್‌ಕ್ರೀಮ್, ರಸ್ತೆ ಬದಿಯಲ್ಲಿ ಜ್ಯೂಸ್ ಮಾಡುವ ನೂರಾರು ಯುವಕರು ಜಿಲ್ಲೆಯೆಲ್ಲೆಡೆ ಅತಂತ್ರರಾಗಿದ್ದು ಅವರಿಗೆ ಊಟದ ವ್ಯವಸ್ಥೆಯಾಗಬೇಕಿದೆ. ಚಿಕ್ಕನಾಯಕನಹಳ್ಳಿಯ ಇತಿಹಾಸ ಪ್ರಸಿದ್ಧ ತಾತಯ್ಯನ ಜಾತ್ರೆಗೆ ಅಂಗಡಿ ತಂದಿದ್ದ ಮಹಾರಾಷ್ಟ್ರದ ಸೊಲ್ಲಾಪುರದಿಂದ ಬಂದಿರುವ ನೂರಾರು ಜನರು ಅತಂತ್ರರಾಗಿ ಪಟ್ಟಣದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನೆಲೆಸಿದ್ದಾರೆ. ಕೆಲವು ದಿನಗಳಿಂದ ವಿಪರೀತ ಮಳೆ ಬೀಳುತ್ತಿದ್ದು ಬಿಡಾರಗಳಲ್ಲಿರುವ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ, ಆಹಾರ ಪದಾರ್ಥಗಳಿಲ್ಲದೆ ಊಟಕ್ಕೆ ಪರದಾಡುತ್ತಿದ್ದಾರೆ, ಇವರಿಗೆ ಉಳಿಯಲು ಯಾವುದಾದರೂ ಸಮುದಾಯ ಭವನದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮನೆಯಿಂದ ಹೊರಹೋಗದೆ ಅಲೆಮಾರಿ ಸಮುದಾಯಗಳು ಊಟವಿಲ್ಲದೆ ಪರದಾಡುತ್ತಿವೆ, ಸರ್ಕಾರ ಬರೀ ಅಕ್ಕಿಕೊಟ್ಟರೆ ಹೊಟ್ಟೆ ತುಂಬುವುದಿಲ್ಲ, ಅಡುಗೆ ಮಾಡಲು ಕನಿಷ್ಠ ಪದಾರ್ಥಗಳಾದರೂ ಬೇಡವೇ? ಜಿಲ್ಲಾಡಳಿತ ಪಡಿತರ ನೀಡುವುದು ಬೇಡ, ಊಟದ ವ್ಯವಸ್ಥೆ ಮಾಡಲಿ. ಮೊದಲೇ ಕಷ್ಟದಲ್ಲಿ ಬದುಕುವ ಸಮುದಾಯಗಳು ಈ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದು ಸವಾಲಾಗಿದೆ. ಗುರುಮೂರ್ತಿ ದಲಿತ ಮುಖಂಡ, ಸಾಲ್ಕಟ್ಟೆ