ಜಿಲ್ಲೆ

ಅಲೆಮಾರಿ ಜನಾಂಗಕ್ಕೆ ಸೌಲಭ್ಯ ಒದಗಿಸಿ

ಬಾಗೇಪಲ್ಲಿ: ತಾಲೂಕಿನಲ್ಲಿ ಅಲೆಮಾರಿ,ಅರೆಅಲೆಮಾರಿ ಸಮುದಾಯದ ಅಂದಾಜು 8 ಸಾವಿರ ಜನರಿದ್ದಾರೆ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ಇವರೆಲ್ಲರಿಗೂ ಮೂಲ ಸೌಲಭ್ಯ ಒದಗಿಸುವಂತೆ ತಾಪಂ ಅಧ್ಯಕ್ಷ ಕೆ.ಆರ್. ನರೇಂದ್ರಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕು ಆಡಳಿತ, ತಾಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮವಾರ ಆಯೋಜಿಸಿದ್ದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಮುದಾಯದ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜೇಂದ್ರ ಪ್ರಸಾದ್ ಮಾತನಾಡಿ, ಗರ್ಭಿಣಿ, ಬಾಣಂತಿಯರಿಗೆ ಇಲಾಖೆಯಿಂದ ಪೌಷ್ಟಿಕಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು. ಅಲೆಮಾರಿ, ಅರೆಅಲೆಮಾರಿ ತಾಲೂಕು ಅಧ್ಯಕ್ಷ ಸೂರ್ಯನಾರಾಯಣ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಚರ್ಚಿಸಲಾಗುತ್ತಿದೆ ಹೊರತು ಸಮುದಾಯದ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ತಿಮ್ಮಂಪಲ್ಲಿ, ಗೊರ್ತಪಲ್ಲಿ, ಕೊತ್ತಕೋಟೆ, ಜೂಲಪಾಳ್ಯ, ರಾಶ್ಚೇರುವು, ಗೂಳೂರು ಗ್ರಾಪಂಗಳ ವ್ಯಾಪ್ತಿಯಲ್ಲಿ ಸಮುದಾಯದವರು ಹೆಚ್ಚಾಗಿದ್ದಾರೆ. ಆದರೆ ಅಲ್ಲಿ ಇದುವರೆಗೂ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜೀವ್ ಗಾಂದಿ ವಸತಿ ನಿಗಮದ ಡಿ.ಸಿ. ರಂಗಪ್ಪ ಮಾತನಾಡಿ, ಅಲೆಮಾರಿ,ಅರೆ ಅಲೆಮಾರಿ ಸಮುದಾಯಗಳ ವಸತಿರಹಿತರಿಗೆ 392 ಮನೆಗಳು ಮಂಜೂರಾಗಿವೆ. ಇವುಗಳಲ್ಲಿ 279 ಮನೆಗಳು ಪೂರ್ಣಗೊಂಡಿದ್ದು ಉಳಿದ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಉಪ ತಹಸೀಲ್ದಾರ್ ನಾಗರಾಜ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿ. ನಾಗರಾಜ್, ವ್ಯವಸ್ಥಾಪಕ ಆರ್. ಶಿವಪ್ಪ, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಡಾ. ಚಿನ್ನಕೈವಾರಮಯ್ಯ, ನರೇಗಾ ಸಹಾಯ ನಿರ್ದೇಶಕ ನಾರಾಯಣ, ಅಲೆಮಾರಿ, ಅರೆಅಲೆಮಾರಿ ಸಮುದಾಯದ ಮುಖಂಡರಾದ ಅಶ್ವತ್ಥಗೌಡ, ಪೈಪಾಳ್ಯ ಜಗನ್ನಾಥ, ವೆಂಕಟೇಶ್ವರ, ಸುರೇಂದ್ರ, ಮಂಜುನಾಥ್, ಪ್ರಭಾಕರೆಡ್ಡಿ, ಆನಂದ, ಈರಪ್ಪ, ನರಸಿಂಹಪ್ಪ, ರಾಜಪ್ಪ, ನಾಗರಾಜ್,ಆದಿನಾರಾಯಣ ಮತ್ತಿತರರು ಇದ್ದರು.