ಜಿಲ್ಲೆ

ಅಲಯನ್ಸ್ ಟಗ್ ಮೇಲಕ್ಕೆತ್ತುವ ಕಾರ್ಯಾಚರಣೆ ಯಶಸ್ವಿ

ಪಡುಬಿದ್ರಿ ವಿಷ್ಣು ಭಜನಾ ಮಂದಿರ ಮುಂಭಾಗ ಕಡಲ ತೀರದಲ್ಲಿ ಅಲಯನ್ಸ್ ಟಗ್ ಬೋಟ್ ಮೇಲಕ್ಕೆತ್ತುವ ಕಾರ್ಯಚರಣೆ ಯಶಸ್ವಿಯಾಗಿ ನಡೆಯಿತು

ಉಡುಪಿ: ತೌಕ್ತೆ ಚಂಡಮಾರುತ ಪರಿಣಾಮ ಸಮುದ್ರದ ಅಲೆಗಳ ಆರ್ಭಟಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ ಎಂಆರ್ ಪಿ ಎಲ್ ನ ಅಲಯನ್ಸ್ ಟಗ್ ಮೇಲಕ್ಕೆತ್ತುವ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ. ಕಳೆದ ಹನ್ನೊಂದು ದಿನಗಳ ಹಿಂದೆ ಬಾರಿ ಅಲೆಗಳ ಹೊಡೆತಕ್ಕೆ ಸಮುದ್ರ ಪಾಲಾಗಿದ್ದ ಟಗ್ ಬೋಟ್ ಪಡುಬಿದ್ರಿ ಸಮೀಪದ ಕಡಲ ತೀರದಲ್ಲಿ ಸಿಲುಕಿತ್ತು. ಟಗ್ ಬೋಟ್ ನಲ್ಲಿ ಎಂಟು ಜನ ಸಿಬ್ಬಂದಿ‌ ಇದ್ದು, ಮೂವರು ಜೀವ ಉಳಿಸಿಕೊಂಡು ಮೇಲಕ್ಕೆ ಬಂದಿದ್ದರೇ. ಇಬ್ಬರ ಮೃತದೇಹ ಪತ್ತೆಯಾಗಿತ್ತು. ಇನ್ನುಳಿದ ಮೂವರಿಗೆ ಶೋಧ ಕಾರ್ಯ ನಡೆಯುತ್ತಿದೆ. ಬೋಟ್ ಮೇಲಕ್ಕೆತ್ತುವ ಕಾರ್ಯಚರಣೆಗೆ ಜಿಲ್ಲಾಧಿಕಾರಿ ಮತ್ತು ಶಾಸಕರ ಸಭೆಯಲ್ಲಿ ಚರ್ಚೆಯಾಗಿದ್ದು, ಅದರಂತೆ ಕಳೆದ ಐದು ದಿನಗಳಿಂದ ಯೋಜಕ ಮತ್ತು ಬಿಲಾಲ್ ಮೊಯ್ದಿನ್ ಸಂಸ್ಥೆ ಜಂಟಿ ಕಾರ್ಯಚರಣೆ ನಡೆಸಿ ಬೋಟನ್ನು ಮಗುಚಿ ಹಾಕುವ ಮೂಲಕ ಕಾರ್ಯಚರಣೆ ಯಶಸ್ವಿಯಾಗಿದೆ.
ಬೋಟ್ ತುಂಬ ಮರಳಿನ ರಾಶಿ ತುಂಬಿಕೊಂಡಿತ್ತು ಎಂದು ಕಾರ್ಯಚರಣೆ ಸಿಬ್ಬಂದಿ ತಿಳಿಸಿದ್ದಾರೆ. ಟಗ್ ಬೋಟನ್ನು ಕೂಡಲೆ ಎನ್ ಎಂ ಪಿಟಿ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅದರಲ್ಲಿ ಡೀಸೆಲ್ ಇಂಧನ ಇರುವ ಕಾರಣ ಸೋರಿಕೆಯಾಗಿ ಪರಿಸರ ಕಲುಷಿತಗೊಳ್ಳುವ ಸಾಧ್ಯತೆ ಹೆಚ್ವಿದೆ. ಇಂದೇ ಬೋಟನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.