ಹೊಸಕೋಟೆ: ಸರ್ಕಾರದ ನಿಯಮಾವಳಿ ಪ್ರಕಾರ ಅರ್ಹರನ್ನು ಗುರುತಿಸಿ ನಿಗಮ ಮಂಡಳಿಗಳ ವಿವಿಧ ಯೋಜನೆಗಳ ಸೌಲಭ್ಯ ವಿತರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ವಿವಿಧ ನಿಗಮ ಮಂಡಳಿಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಫಲಾನುಭವಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.
ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಅರ್ಹರನ್ನು ಆಯ್ಕೆ ಮಾಡುವ ತೆಗೆ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿ ಸೌಲಭ್ಯ ವಿತರಣೆ ಮಾಡಬೇಕು ಎಂದು ತಿಳಿಸಿದರು.
ವಾಲ್ಮೀಕಿ ನಿಗಮದ ಅಧಿಕಾರಿ ರಮೇಶ್ ಮಾತನಾಡಿ, ನಿಗಮದಿಂದ ಈ ಬಾರಿ ಸ್ವಯಂ ಉದ್ಯೋಗದ ನೇರ ಸಾಲದಡಿ ಇಬ್ಬರು ಫಲಾನುಭವಿಗಳನ್ನು ಗುರುತಿಸಲಾಗಿದ್ದು, ತಲಾ 25 ಸಾವಿರ ರೂಪಾಯಿ ಸಾಲ ಹಾಗೂ 25 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ ಒಬ್ಬರಿಗೆ 1 ಲಕ್ಷ ರೂಪಾಯಿ ಸಾಲ ವಿತರಣೆ, ಗಂಗಾ ಕಲ್ಯಾಣ ಯೋಜನೆಯಡಿ 8 ಫಲಾನುಭವಿಗಳಿಗೆ 3.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ 50 ಸಾವಿರ ರೂಪಾಯಿ ಸಾಲ ವಿತರಣೆ ಹಾಗೂ 10 ಪ್ರೇರಣಾ ಮಹಿಳಾ ಸಂಘಟನೆಗಳಿಗೆ ತಲಾ 2.5 ಲಕ್ಷ ರೂ. ಸಾಲ ವಿತರಣೆ ಮಾಡಲು ಪಟ್ಟಿ ಸಿದ್ಧಗೊಳಿಸಲಾಗಿದೆ ಎಂದು ತಿಳಿಸಿದರು.
ದೇವರಾಜ ಅರಸ್ ನಿಗಮದಿಂದ ನೇರ ಸಾಲ ಯೋಜನೆಯಡಿ 15 ಫಲಾನುಭವಿಗಳಿಗೆ 40 ಸಾವಿರ ರೂಪಾಯಿ ಸಾಲ ಹಾಗೂ 10 ಸಾವಿರ ರೂ. ಸಹಾಯಧನ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ 11 ಫಲಾನುಭವಿಗಳಿಗೆ 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ 50 ಸಾವಿರ ರೂಪಾಯಿ ಸಾಲ ವಿತರಣೆ ಮಾಡಲಾಗುವುದು ಎಂದು ದೇವರಾಜು ಅರಸು ನಿಗಮದ ಅಧಿಕಾರಿ ರಂಗನಾಥ್ ಮಾಹಿತಿ ನೀಡಿದರು.
ಅಂಬೇಡ್ಕರ್ ನಿಗಮದ ಅಧಿಕಾರಿ ಶಾರದಾ ಮಾತನಾಡಿ, ನಿಗಮದಿಂದ ನೇರ ಸಾಲ ಸೌಲಭ್ಯಕ್ಕೆ 10 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ತಲಾ 25 ಸಾವಿರ ರೂಪಾಯಿ ಸಾಲ ಹಾಗೂ 25 ಸಾವಿರ ರೂ.ಸಬ್ಸಿಡಿ ನೀಡಲಾಗುವುದು. ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ 3 ಫಲಾನುಭವಿಗಳಿಗೆ 1 ಲಕ್ಷ ರೂ ಸಾಲ ವಿತರಣೆ, ಗಂಗಾ ಕಲ್ಯಾಣ ಯೋಜನೆಯಡಿ 10 ಫಲಾನುಭವಿಗಳಿಗೆ 3.5 ಲಕ್ಷ ರೂ. ಮೌಲ್ಯದ ಉಪಕರಣ ಹಾಗೂ 50 ಸಾವಿರ ರೂಪಾಯಿ ವಿತರಣೆ ಹಾಗೂ ಪ್ರೇರಣಾ ಮಹಿಳಾ ಸಂಘಟನೆಯ ಫಲಾನುಭವಿಗೆ 2.5 ಲಕ್ಷ ರೂ.ಸಾಲ ವಿತರಣೆ ಮಾಡಲು ಪಟ್ಟಿ ಸಿದ್ಧಗೊಳಿಸಲಾಗಿದೆ ಎಂದರು.