ತರೀಕೆರೆ ತಾಪಂನಲ್ಲಿ ಏರ್ಪಡಿಸಿದ್ದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಮಾತನಾಡಿದರು. ಡಾ. ಆರ್.ದೇವೇಂದ್ರಪ್ಪ, ಎನ್.ಚರಣ್‌ರಾಜ್, ಮಂಜುನಾಥ್, ಜಗದೀಶ್ ಇತರರಿದ್ದರು. 
ಜಿಲ್ಲೆ

ಅರ್ಹರಿಗೆ ಸೌಲಭ್ಯ ಕಲ್ಪಿಸಿ

ತರೀಕೆರೆ: ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸಿಗುವಂತೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಗೋವಿಂದೇಗೌಡ ಹೇಳಿದರು.

ತಾಪಂನಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರತಿ ತಿಂಗಳೂ ಗ್ಯಾರಂಟಿ ಯೋಜನೆ ಕುರಿತು ಸಂಬಂಧಿತ ಇಲಾಖೆ ಕಚೇರಿಯಲ್ಲಿ ಆಯೋಜಿಸುವ ಮಾಸಿಕ ಸಭೆಗೆ ಅನುಷ್ಠಾನ ಸಮಿತಿ ಸದಸ್ಯರನ್ನು ಆಹ್ವಾನಿಸಿ ಸೂಕ್ತ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸದ್ಯದಲ್ಲೇ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಒಂದೊಂದು ಗ್ರಾಮದಲ್ಲಿ ಶಿಬಿರ ಆಯೋಜಿಸಿ ಪಂಚ ಗ್ಯಾರಂಟಿಯಿಂದ ಆಗುತ್ತಿರುವ ಪ್ರಯೋಜನಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು ಎಂದರು.

ತಾಪಂ ಇಒ ಡಾ. ಆರ್.ದೇವೇಂದ್ರಪ್ಪ ಮಾತನಾಡಿ, ಗ್ಯಾರಂಟಿ ಯೋಜನೆ ವ್ಯಾಪ್ತಿಗೊಳಪಡುವ 5 ಇಲಾಖೆ ಅಧಿಕಾರಿಗಳು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದರು.

ಯುವ ನಿಧಿ ಯೋಜನಾಧಿಕಾರಿ ಬೀಬಿಜಾನ್ ನದಾಪ್ ಮಾತನಾಡಿ, ಸದ್ಯದಲ್ಲೇ ಎಲ್ಲ ಕಾಲೇಜುಗಳಲ್ಲಿ ಸಭೆ ಏರ್ಪಡಿಸಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಸಭೆಯಲ್ಲಿ ಯೋಜನೆ ಲಾಭ ಪಡೆದುಕೊಳ್ಳುವಂತೆ ತಿಳಿಸಲಾಗುವುದು ಎಂದು ಹೇಳಿದರು.

ಆಹಾರ ಇಲಾಖೆ ಶಿರಸ್ತೇದಾರ್ ಜಗದೀಶ್ ಮಾತನಾಡಿ, ಈ ಬಾರಿ ಪಡಿತರ ವಿತರಣೆ ಮಾಡುವಾಗ ಫೆಬ್ರವರಿ ತಿಂಗಳ 5 ಕೆ.ಜಿ ಅಕ್ಕಿ ಸೇರಿಸಿ ಒಟ್ಟು 15 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಿಡಿಪಿಒ ಎನ್.ಚರಣ್‌ರಾಜ್, ಮೆಸ್ಕಾಂ ಎಇಇ ಮಂಜುನಾಥ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಇದ್ದರು.