ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಿ:ಡಿಸಿ.ಸಿ. ಸತ್ಯಭಾಮಾ

ಹಾಸನ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ವಿವಿಧ ಇಲಾಖೆಗಳು ಸಾಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಆಹಾರ ಸುರಕ್ಷತೆ ಮಿಷನ್ ಅಡಿಯಲ್ಲಿ ಬಿತ್ತನೆ ಬೀಜ, ಕೀಟನಾಶಕಗಳು, ಇತರೆ ಯಂತ್ರೋಪಕರಣಗಳನ್ನು ಸಹಾಯಧನದಲ್ಲಿ ವಿತರಿಸಲು ಕ್ರಮವಹಿಸಿ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಅಭಿವೃದ್ಧಿಗೆ ಒತ್ತು ನೀಡಿ ಅರ್ಹ ಫಲಾನುಭವಿಗಳಿಗೆ ಸವಲತ್ತು ಒದಗಿಸಿ ಎಂದು ತಿಳಿಸಿದರು.
ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಶುಚಿತ್ವ ಕಾಪಾಡಿಕೊಂಡು ಉತ್ತಮ ರೀತಿಯಲ್ಲಿ ಆಹಾರ ನೀಡುವುದರ ಜತೆಗೆ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಗಧಿತ ಸಮಯಕ್ಕೆ ಮಾಡಲಾಗಿದೆಯೇ? ಎಂಬುದನ್ನು ಪರಿಶೀಲನೆ ಮಾಡಬೇಕು. ಜಿಲ್ಲೆಯಲ್ಲಿ 307 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ನಿಟ್ಟಿನಲ್ಲಿ ಗಮನಹರಿಸಿ ಸ್ಥಳ ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗೆ ಸೂಚಿಸಿದರಲ್ಲದೆ, ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳನ್ನು ಬಾಕಿ ಉಳಿಸಿಲ್ಲ, ನೀವು ಸಹ ಅದೇ ರೀತಿ ಕೆಲಸ ನಿರ್ವಹಿಸಬೇಕು ಎಂದರು.
ಹಿಮ್ಸ್‌ನಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಲು ಸೂಚಿಸಿದರಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸೌಲಭ್ಯಗಳ ಬಗ್ಗೆ ಬೋರ್ಡ್ ಹಾಕುವಂತೆ ನಿರ್ದೇಶಕರಿಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ರಸ್ತೆ, ಚರಂಡಿ ಕಾಮಗಾರಿಗಳನ್ನು ಮಾಡುವಾಗ ಶೇ.60 ರಷ್ಟು ಎಸ್‌ಸಿ, ಎಸ್‌ಟಿ ಜನ ವಾಸವಿರುವ ಬಗ್ಗೆ ದೃಢೀಕರಣ ಪಡೆಯುವಂತೆ ಸೂಚಿಸಿದರು. ಭಾರಿ ನೀರಾವರಿ ಇಲಾಖೆಯಿಂದ ವೈಯಕ್ತಿಕ ಮತ್ತು ಸಾಮೂಹಿಕ ಕೊಳವೆ ಬಾವಿ, ಕಾಲೋನಿ ರಸ್ತೆಗಳು, ಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡುವಂತೆ ತಿಳಿಸಿದರಲ್ಲದೆ, ಪಟ್ಟಿಯನ್ನು ಸಮಾಜ ಕಲ್ಯಾಣಾಧಿಕಾರಿ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಮೀನುಗಾರಿಕೆಯು ಇಂದು ಒಂದು ಉದ್ಯಮವಾಗಿದೆ. ಬೀದಿಬದಿಯಲ್ಲಿ ತೆರೆದ ರೀತಿಯಲ್ಲಿ ಮೀನು ಮಾರಾಟ ಮಾಡುವುದನ್ನು ಗಮನಿಸಿದ್ದು, ಗ್ಲಾಸ್‌ನಲ್ಲಿ ಕವರ್ ಮಾಡಿಟ್ಟುಕೊಂಡು ಮಾರಾಟ ಮಾಡುವಂತೆ ತಿಳಿಸಿ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಮೀನು ಹಿಡಿಯಲು ಜಲಾಶಯಗಳಿಗೆ ಇಳಿಯುವ ಸಂದರ್ಭದಲ್ಲಿ ಲೈಫ್ ಜಾಕೆಟ್ ಬಳಸುವಂತೆ ಮೀನುಗಾರರಿಗೆ ತಿಳಿವಳಿಕೆ ನೀಡಿ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ದೂದ್ ಫೀರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.