ಮದ್ದೂರು: ಮಹಿಳೆಯರಿಗೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ ತಿಳಿಸಿದರು.
ತಾಲೂಕಿನ ಕದಲೂರು ಗ್ರಾಮದಲ್ಲಿ ಗ್ರಾಪಂ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಸ್ವಾಲಂಬಿಯಾಗುವ ಜತೆಗೆ ಆರ್ಥಿಕವಾಗಿ ಸದೃಢರಾಗಬೇಕೆಂಬ ಉದ್ದೇಶದಿಂದ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮಹಿಳೆಯರಿಗೆ ಮಾಹಿತಿ ನೀಡುವ ಜತೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರ ಸವಲತ್ತುಗಳು ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಸಕ ಕೆ.ಎಂ. ಉದಯ್ ಸ್ವಗ್ರಾಮದವಾದ ಕದಲೂರು ಗ್ರಾಮವನ್ನು ರಾಜ್ಯಕ್ಕೆ ಮಾದರಿ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರದಿಂದ ವಿಶೇಷ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡಲು ಮುಂದಾಗಿರುವುದು ಸಂತಸ. ಕದಲೂರು ಗ್ರಾಪಂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಗ್ರಾಪಂ ವತಿಯಿಂದ 12 ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ ಹಮ್ಮಿಕೊಂಡಿದೆ ಎಂದರು.
ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಭಾರ್ಗವಿ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆರೋಗ್ಯ ಇಲಾಖೆಯಿಂದ ಮಹಿಳೆಯರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಇದನ್ನು ಬಳಸಿಕೊಂಡು ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಸಭೆಯಲ್ಲಿ ಮಹಿಳೆಯರ ಕುಂದುಕೊರತೆಗಳನ್ನು ಆಲಿಸಲಾಯಿತು. ಅಂಗವಿಕಲರಿಗೆ ಹಾಗೂ ಫಲಾನುಭವಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು. ಮಹಿಳೆಯರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ವಿನುತಾಕೆ.ಎಂ.ಉದಯ್, ತಾಪಂ ಇಒ ರಾಮಲಿಂಗಯ್ಯ, ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ, ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಶಿವಣ್ಣ, ಟಿ.ತಿಮ್ಮೇಗೌಡ, ಕೆ.ಸಿ.ಲೋಕೇಶ್, ಪಾಪಣ್ಣ, ಜಯಲಕ್ಷಮ್ಮ, ರತ್ನಮ್ಮ, ಸರೋಜಮ್ಮ, ಪಿಡಿಒ ಜಗದೀಶ್, ಸಿಬ್ಬಂದಿ ಎಸ್.ಕೆ.ನಾಗೇಶ್, ಕವಿತಾ, ಸುನಂದಮ್ಮ, ರಕ್ಷಿತಾ, ಹರೀಶ ಇದ್ದರು.