filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.032657; highlight: 1; algolist: 0; multi-frame: 1; brp_mask: 8; brp_del_th: 0.0058,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 45; 
ಜಿಲ್ಲೆ

ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು

ಸರಗೂರು: ಶಾಸಕನಾದ ಬಳಿಕ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸಿದ್ದೇನೆ ಎಂದು ಶಾಸಕ ಅನಿಲ್‌ಕುಮಾರ್ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅಕ್ರಮ-ಸಕ್ರಮ ಸಮಿತಿ ಸಹಾಯದೊಂದಿಗೆ 43 ರೈತರಿಗೆ ಸಾಗುವಳಿ ಮತ್ತು ಪಹಣಿ ಪತ್ರ ವಿತರಿಸಿ ಮಾತನಾಡಿದರು.

45ರಿಂದ 50 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾಗುವಳಿ ಪತ್ರ ಮಂಜೂರು ಮಾಡುವಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಹಾಗೂ ಅಧಿಕಾರಿಗಳ ಪಾತ್ರ ಅಪಾರವಾಗಿದೆ ಎಂದರು.

ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾಗುವಳಿ ಪತ್ರ ನಮ್ಮ ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂದು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ತಾಲೂಕಿನ ಗಡಿ ಭಾಗದ ಕಾಡಂಚಿನ ಚಿಕ್ಕಬರಗಿ ಗ್ರಾಮದ 43 ರೈತರಿಗೆ ಸಾಗುವಳಿ ಪತ್ರ ಹಾಗೂ ಪಹಣಿ ನೀಡಲಾಗುತ್ತಿದೆ ಎಂದರು.

ಬಾಕಿ ಉಳಿದ ರೈತರಿಗೆ ದಾಖಲಾತಿ, ಅನುಭವ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ತಮ್ಮ ಅವಧಿಯಲ್ಲಿ ಭೂ ಒಡೆತನದ ಹಕ್ಕುಪತ್ರವನ್ನು ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು. ಹಲವು ವರ್ಷಗಳಿಂದ ಅನುಭೋಗದಲ್ಲಿರುವ ಜಮೀನಿನ ಸಾಗುವಳಿ ಪತ್ರ ಪಡೆಯಲು ತಾಲೂಕಿನ ಅತ್ಯಂತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿದರೂ ಕಾನೂನು ಚೌಕಟ್ಟಿನ ವ್ಯಾಪ್ತಿಗೆ ಬರುವ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಪತ್ರ ವಿತರಿಸಲಾಗಿದೆ. ಈ ಹಿಂದೆ ಅಕ್ರಮ-ಸಕ್ರಮ ಸಮಿತಿಗೆ ಯಾವುದೇ ನಿಬಂಧನೆಗಳು ಇರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಅಕ್ರಮ ಸಕ್ರಮ ಸಮಿತಿಗೆ ಕಾನೂನಿನ ತೊಡಕಾಗಿ ಅನೇಕ ನಿಬಂಧನೆಗಳನ್ನು ಹೇರಲಾಗಿದೆ ಎಂದರು.

ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಕೆಲವು ತೊಂದರೆಗಳಿಂದ ಅನನುಕೂಲವಾಗಿದ್ದು ಅಧಿಕಾರಿಗಳನ್ನು ಕೆಲವು ನಿಬಂಧನೆಗಳು ಕಟ್ಟಿಹಾಕಿವೆ. ಸರ್ಕಾರದ ನಿಬಂಧನೆ ಮತ್ತು ಕಾನೂನನ್ನು ಮೀರಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ರೈತರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತಿಲ್ಲ, ಈಗಾಗಲೇ 6 ರಿಂದ 8 ಸಭೆಗಳನ್ನ ಮಾಡಿದ್ದು ಆಯ್ಕೆಯಾದವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಗೋಮಾಳ, ಹಿಡುವಳಿ, ಕೆರೆ-ಕಟ್ಟೆ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಆದೇಶ ಬರೆದಿರುವ ಕಾರಣ ಅದನ್ನು ಆಯ್ಕೆ ಸಮಿತಿಯಲ್ಲಿ ಇಡಲಾಗಿಲ್ಲ, ಮುಂದಿನ ದಿನಗಳಲ್ಲಿ ಆದೇಶ ಬಂದ ನಂತರ ಪರಿಶೀಲಿಸಿ ಉಳುಮೆ ಮಾಡುತ್ತಿರುವವರಿಗೆ ಸಾಗುವಳಿ ನೀಡಲಾಗುವುದು. ಸಮಿತಿ ಸದಸ್ಯರು ಸಹಕಾರ ನೀಡುತ್ತಿದ್ದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ಅಕ್ರಮ-ಸಕ್ರಮ ಸಮಿತಿ ಸದಸ್ಯ ಶಿವಶಂಕರ್, ಪ್ರಭುಸ್ವಾಮಿ, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಶುಂಭುಲಿಂಗನಾಯಕ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಮೈ ಮುಲ್ ನಿರ್ದೇಶಕ ಈರೇಗೌಡ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಇಒ ಪ್ರೇಮ್‌ಕುಮಾರ್, ಗ್ರಾಪಂ ಸದಸ್ಯ ರಮೇಶ್, ಅಹಿಂದ ತಾಲೂಕು ಅಧ್ಯಕ್ಷ ಬರಗಿ ಪ್ರಭುಸ್ವಾಮಿ, ಮುಖಂಡರು ಕುಂದೂರು ಮೂರ್ತಿ,ಅಂಕನಾಯಕ, ಮಹೇಶ್, ಮಹಾವೀರ, ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ, ಉಪ ತಹಸೀಲ್ದಾರ್ ಸುನೀಲ್, ಶಿರಸ್ತೇಲ್ದಾರ್ ರವಿಚಂದ್ರ, ವೈರಮುಡಿ ಮತ್ತಿತರರು ಹಾಜರಿದ್ದರು.