ಬಾಗಲಕೋಟೆ: ಬಿಟ್ಟು ಹೋಗಿರುವ, ಯಾವುದೇ ದಾಖಲೆ ಹೊಂದಿರದ ಮತ್ತು ಬಡ ಕುಟುಂಬಗಳು ಸರಕಾರಿ ಯೋಜನೆಗಳ ಸವಲತ್ತುಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲೆಯಾಧ್ಯಾಂತ ಗ್ಯಾರಂಟಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಶುಕ್ರವಾರದಂದು, ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯ ಸರಕಾರದ ಮಹತ್ವಕಾಂಕ್ಷಿ ಐದೂ ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಈ ಯೋಜನೆಗಳಿಂದ ಅರ್ಹ ಫಲಾನುಭವಿಗಳು ಮಾಹಿತಿ ಕೊರತೆಯಿಂದ ವಂಚಿತರಾಗಬಾರದು ಎಂಬುದನ್ನು ಮನಗಂಡು ಮುಖ್ಯಮಂತ್ರಿಯವರು ಗ್ಯಾರಂಟಿ ಸಮಾವೇಶಗಳನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲು ಸೂಚಿಸಿದ್ದು, ಜಿಲ್ಲೆಯಲ್ಲಿ ಜ.೨೭ ರಿಂದ ಫೆ.೨ ರವರೆಗೆ ಗ್ಯಾರಂಟಿ ಸಮಾವೇಶ ಆಯೋಜಿಸಲು ಅಗತ್ಯ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದರು.
ಸಮಾವೇಶಗಳ ಆಯೋಜನೆಯ ಸಂಪೂರ್ಣ ಜವಾಬ್ದಾರಿಯು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ಇದ್ದು, ತಾಲೂಕು ಮಟ್ಟದಲ್ಲಿ ತಹಶೀಲ್ದಾರರನ್ನು ಜವಾಬ್ದಾರಿ ಅಧಿಕಾರಿಯನ್ನಾಗಿ ಮಾಡಬೇಕು. ಆಯಾ ತಾಲೂಕು ಮತ್ತು ಹೊಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು, ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ, ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣ ಸೇರಿ ವಿವಿಧ ಮಾಧ್ಯಮಗಳ ಮೂಲಕ ಗ್ಯಾರಂಟಿ ಸಮಾವೇಶ ಮತ್ತು ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ಕೈಗೊಳ್ಳಲು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಮಾತನಾಡಿ ಗ್ಯಾರಂಟಿ ಸಮಾವೇಶಗಳನ್ನು ಗ್ರಾಮ ಮಟ್ಟದಲ್ಲಿ ಕೂಡ ಆಯೋಜಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುವುದು, ಇದಕ್ಕಾಗಿ ರೂಟ್ ಮ್ಯಾಪ್ ತಯಾರಿಸಲಾಗುವುದು, ಬಿಟ್ಟು ಹೋಗಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯ ಮಂಜೂರಾತಿ ಆದೇಶ ನೀಡಲು ಮತ್ತು ಯೋಜನೆಗಳನ್ನು ಸದುಪಯೋಗ ಪಡೆದ ಫಲಾನುಭವಿಗಳಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುವಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಮಾತನಾಡಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದು ಕೂಡ ಮುಖ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಯೋಜನೆಯಿಂದ ವಂಚಿತರಾದವರನ್ನು ಗುರುತಿಸುವ ಕಾರ್ಯ ಮಾಡಿ, ಸಮಾವೇಶದಲ್ಲಿ ನೋಂದಣಿ ಮಾಡಿಸಲು ಕ್ರಮ ವಹಿಸುವ ಮೂಲಕ ಗ್ಯಾರಂಟಿ ಸಮಾವೇಶವನ್ನು ಯಶಸ್ವಿಗೊಳಿಸಲಾಗುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಆಹಾರ ಸರಬರಾಜು ಇಲಾಖೆ ಜಂಟಿ ನಿರ್ದೆಶಕ ಚನ್ನಬಸಪ್ಪ ಕೊಡ್ಲಿ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.