ಜಿಲ್ಲೆ

ಅರ್ಹ ಫಲಾನುಭವಿಗಳ ಸಮೀಕ್ಷೆಗೆ ಸೂಚನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಿಯ ಜಗದೀಶ ನಗರದಲ್ಲಿ ನಿರ್ಮಿಸಲಾದ 612 ಆಶ್ರಯ ಮನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ಅನರ್ಹ ಫಲಾನುಭವಿಗಳಿದ್ದಲ್ಲಿ, ಅಂತಹ ಪ್ರಕರಣಗಳನ್ನು ಸಮೀಕ್ಷೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಜಿಲ್ಲಾಡಳಿತಕ್ಕೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಜಗದೀಶ ನಗರ, ಗಿರಣಿಚಾಳ ಜನರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಗದೀಶ ನಗರದ 16 ಎಕರೆ ಜಾಗದಲ್ಲಿ 2004ರಲ್ಲಿ 612 ಮನೆಗಳನ್ನು ಜಿಲ್ಲಾಡಳಿತವು ಆಶ್ರಯ ಸಮಿತಿಯಿಂದ ನಿರ್ಮಿಸಿದೆ. ಈ ಪೈಕಿ 188 ಮನೆಗಳ ಜಾಗವನ್ನು ವಿಮಾನ ನಿಲ್ದಾಣದ ವಿಸ್ತರಣೆಗೆ ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ಮನೆಗಳಲ್ಲಿದ್ದ 150 ಜನರನ್ನು ಪಟ್ಟಿ ಮಾಡಿತ್ತು. 38 ಜನರು ಸಮೀಕ್ಷೆ ಸಮಯದಲ್ಲಿ ಮನೆಯಲ್ಲಿರದ ಕಾರಣ ಕೈ ಬಿಡಲಾಗಿದೆ ಎಂದು ನಿವಾಸಿಗರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಲಾಡ, 38ಜನರು ಅರ್ಹರಿರುವ ಬಗ್ಗೆ ಇನ್ನೊಮ್ಮೆ ಸಮೀಕ್ಷೆ ನಡೆಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ತಿಳಿಸಿದರು.
ಉಳಿದ 424 ಫಲಾನುಭವಿಗಳನ್ನು ನನ್ನ ಮನೆ ನನ್ನ ಹಕ್ಕು ಯೋಜನೆ ಯಡಿ 2015ರಲ್ಲಿ ಸಮೀಕ್ಷೆ ಮಾಡಲಾಗಿತ್ತು. ಈ ಪೈಕಿ 166 ಫಲಾನುಭವಿಗಳ ಆಯ್ಕೆ ಬಗ್ಗೆ ಜಗದೀಶ ನಗರ ನಿವಾಸಿಗರು ಸಂದೇಹ ವ್ಯಕ್ತ ಪಡಿಸಿದ್ದರಿಂದ ಇವರನ್ನು ಸಹ ಆಯ್ಕೆ ಮಾನದಂಡಗಳ ಪ್ರಕಾರ ಪುನರ್ ಸಮೀಕ್ಷೆ ಮಾಡುವಂತೆ ಸಚಿವರು ಸೂಚಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಮಾನ ನಿಲ್ದಾಣದ ಸುತ್ತ 1248 ಮನೆಗಳ ಆಶ್ರಯ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತಿದ್ದು, ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಇಲ್ಲಿಯೂ ಪರಿಗಣಿಸಲಾಗುವುದು ಎಂದರು.
ನಂತರ ಗಿರಣಿಚಾಳ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ ಸಚಿವರು, 7.28 ಎಕರೆಯಲ್ಲಿ 525 ಮನೆಗಳಿದ್ದು, 70 ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರಿಗೆ ಹಕ್ಕುಪತ್ರ ನೊಂದಣಿಗೆ ಅನುಕೂಲವಾಗುವಂತೆ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ನೂತನ ಬಸ್ ನಿಲ್ದಾಣ ಬಳಿಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಅಗತ್ಯವಿರುವ ಹೆಚ್ಚಿನ ಸ್ಥಳ ಹಾಗೂ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಪಾಲಿಕೆ ಆಯುಕ್ತರಿಗೆ ತಿಳಿಸಿದರು.
ಜಿಪಂ ಸಿಇಒ ಸ್ವರೂಪ ಟಿ.ಕೆ, ಎಸಿ ಅಶೋಕ ತೇಲಿ, ಇತರರು ಇದ್ದರು.