ಗೋಣಿಕೊಪ್ಪ: ಮೀನು ಮಾರಾಟದ ಲೈಸೆನ್ಸ್ ನೀಡಲು ವಿಳಂಬ ಮಾಡಿದ ಅರ್ವತೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮೈಸೂರು ವಿಭಾಗದ ಕುಂದುಕೊರತೆ ನಿವಾರಣಾ ಪ್ರಾಧಿಕಾರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಗೋಣಿಕೊಪ್ಪಲ್ಲಿನ ವಿ.ಎಸ್. ಸೂರ್ಯ ಅವರು ದ್ವಿಚಕ್ರ ವಾಹನದಲ್ಲಿ ಹಸಿ ಮೀನು ಮಾರಾಟ ಮಾಡಲು ಲೈಸನ್ಸ್ ಪಡೆಯಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದರ ಅನ್ವಯ ಹರಾಜು ಪ್ರಕ್ರಿಯೆ ನಡೆದು ಲೈಸನ್ಸ್ ಶುಲ್ಕ 1 ಲಕ್ಷ ರೂ. ಹಾಗೂ ಠೇವಣಿ 25,000 ರೂ. ಪಾವತಿಸಿ ರಸೀದಿ ಪಡೆದುಕೊಂಡಿದ್ದರು.
ಆದರೆ ಹರಾಜು ಪ್ರಕ್ರಿಯೆ ನಡೆದು ಒಂದು ವರ್ಷವಾದರೂ ಸೂರ್ಯ ಅವರಿಗೆ ಲೈಸೆನ್ಸ್ ನೀಡಿರಲೇ ಇಲ್ಲ. ಈ ಸಂಬಂದ 2022 ರಂದು ಮೈಸೂರು ವಿಭಾಗದ ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಅಭಿವೃದ್ಧಿ ಅಧಿಕಾರಿ ಶಂಕರ್‌ನಾರಾಯಣ ವಿರುದ್ಧ ದೂರು ಸಲ್ಲಿಸಲಾಗಿತ್ತು. ಜು.18 ರಂದು ಪ್ರಾಧಿಕಾರ ಕೂಲಂಕಶ ವಿಚಾರಣೆ ನಡೆಸಿ ಪಿಡಿಒ ಶಂಕರ್‌ನಾರಾಯಣ ಅವರಿಗೆ 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಲ್ಲದೆ ದೂರುದಾರ ಸೂರ್ಯ ಅವರಿಂದ ಕಟ್ಟಿಸಿಕೊಂಡ ಹಣವನ್ನು 60 ದಿನದೊಳಗೆ ವಾಪಸ್ ನೀಡುವಂತೆ ಆದೇಶಿಸಿದೆ.