ಜಿಲ್ಲೆ

ಅರ್ಥಶಾಸ್ತ್ರ ರಾಜ್ಯನಿರ್ವಹಣೆಯ ಪಥದರ್ಶಿ :ಡಾ. ಬಿ.ಆರ್. ಸುಬ್ರಹ್ಮಣ್ಯ

ಹಾಸನ: ಶಾಸ್ತ್ರ ಎಂಬುದು ವರ್ತಮಾನದ ಜೀವನಶೈಲಿಗೆ, ಭವಿಷ್ಯತ್ತಿನ ಹಿತಕರ ಸಂವಿಧಾನದ ಜೀವನಕ್ಕೆ ದಾರಿ ತೋರುವ ನೀತಿ ನಿಯಮಗಳ ಮಾರ್ಗದರ್ಶಿಗ್ರಂಥ ಎಂದು ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ. ಬಿ.ಆರ್. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ನಗರದ ಎಚ್.ಆರ್. ಇನ್ಸ್ಟಿಟ್ಯೂಟ್‌ನ ಪದವಿ ವಿಭಾಗದವರು ಸಂಸ್ಕೃತ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೌಟಿಲ್ಯನ ಅರ್ಥಶಾಸ್ತ್ರವು ರಾಜಕೀಯ ವಿಜ್ಞಾನ, ಆರ್ಥಿಕನೀತಿ ಮತ್ತು ಮಿಲಿಟರಿ ಕಾರ್ಯತಂತ್ರದ ರೂಪುರೇಷೆಗಳನ್ನೂ, ರಾಜ್ಯದ ಸಮರ್ಥ ಆಳ್ವಿಕೆಯ ವಿಧಾನವನ್ನೂ ವಿವರಿಸುತ್ತದೆ. ರಾಜ್ಯವನ್ನು ಆಳುವಾಗ ಸ್ವಾಮಿ (ಒಡೆಯ), ಮಂತ್ರಿ, ಜನಪದ, ದುರ್ಗ, ಕೋಶ, ದಂಡ, ಮಿತ್ರ ಎಂದು ಏಳು ವಿಭಾಗಗಳನ್ನು ಮಾಡಿ ಎಲ್ಲರನ್ನೂ ಸಹಮತಕ್ಕೆ ತೆಗೆದುಕೊಂಡು ದೇಶವನ್ನು ಸುಭಿಕ್ಷವಾಗಿ, ಸುಭದ್ರವಾಗಿ ಇಡುವ ಕೆಲಸವನ್ನು ಮಾಡಬೇಕು ಎಂದು ವಿವರಿಸಿದ್ದರು.
ಧರ್ಮರಕ್ಷಣೆಯೇ ರಾಜ್ಯದ ಆಡಳಿತದ ಮೂಲ ಉದ್ದೇಶವಾಗಬೇಕು. ಆಗ ಉಳಿದವರೂ ಸಹ ತಮ್ಮ ವೃತ್ತಿಧರ್ಮದ ಪಾಲನೆಯ ಮೂಲಕ ದೇಶದ ಏಳಿಗೆಗೆ ಕಾರಣರಾಗುತ್ತಾರೆ. ಇಂತಹ ಚಿಂತನೆ ಗುರುಮುಖೇನ ಅಧ್ಯಯನ ಆದಾಗಲೇ ಸಾಧ್ಯವಾಗುವುದು. ಈ ಎಲ್ಲಾ ಚಿಂತನೆಗಳನ್ನು ಚಂದ್ರಗುಪ್ತನಿಗೆ ಬೋಧಿಸಿ, ಅನುಷ್ಠಾನಕ್ಕೆ ತಂದೇ ಆಚಾರ್ಯ ಚಾಣಕ್ಯರು, ಕುಟಿಲ- ಸ್ವಾರ್ಥಪರ ನಂದವಂಶದ ಆಳ್ವಿಕೆಗೆ ಮಂಗಳ ಹಾಡಿ, ದೇಶಹಿತಚಿಂತನೆಯ ಮೌರ್ಯವಂಶದ ಸ್ಥಾಪನೆಗೆ ಕಾರಣರಾದದ್ದು. ಇದೇ ವಿಚಾರಗಳನ್ನು ಇಂದು ನಮ್ಮ ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿದ್ದೇವೆ. ಈ ವಿಚಾರಗಳಲ್ಲಿ ಭಾರತೀಯ ಚಿಂತನೆ ಹೇಗಿತ್ತು ಎಂಬುದನ್ನು ಕಾಣಬೇಕಾದರೆ ನಮ್ಮ ಪ್ರಾಚೀನ ಸಂಸ್ಕೃತಗ್ರಂಥಗಳ ಒಳಹೂರಣವನ್ನು ಆಸ್ವಾದಿಸಬೇಕು ಎಂದು ಸಂಸ್ಕೃತದ ಮಹತಿಯನ್ನು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಎಂ.ಕೆ. ಪಾರ್ಥ ಮಾತನಾಡಿ, ಸಂಸ್ಕೃತ ಭಾಷೆ ಅತ್ಯಂತ ಪ್ರಾಚೀನ. ಅದನ್ನು ಎಲ್ಲರೂ ಕೂಡ ಕಲಿಯಬೇಕು. ಕಾಮರ್ಸ್ ವಿಭಾಗದವರೂ ಕೂಡ ಸಂಸ್ಕೃತ ಭಾಷಾ ಕಲಿಕೆಯಲ್ಲಿ ಆಸಕ್ತಿಯನ್ನಿರಿಸಿಕೊಳ್ಳಬೇಕು. ಬಹುಭಾಷಾ ಅಧ್ಯಯನಕ್ಕೆ ಸಂಸ್ಕೃತ ಬಹಳ ಸಹಕಾರಿಯಾಗುತ್ತದೆ ಎಂದರು.
ಕುಮಾರಿ ಸ್ಮತಿನಾವಡಾ ಗಾಯನದ ಸಂಸ್ಕೃತದ ಹಿರಿಮೆ ಸಾರುವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿಪೂರ್ವವಿಭಾಗಗಳ ಪ್ರಾಂಶುಪಾಲ ಬಿ.ಎನ್. ಅರುಣ್‌ಕುಮಾರ್, ಎಚ್.ಕೆ. ಸತೀಶ್, ಉಪನ್ಯಾಸಕವರ್ಗ, ಉಪನ್ಯಾಸಕಿ ಶೀಲಾ,ಪ್ರೆಸಿಲ್ಲಾ, ನೀರಜಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.