ಬೀದರ್: ಜಿಲ್ಲೆಯಲ್ಲಿ ಸೆ.೩ರಂದು ರಾಜ್ಯದ ಗಮನ ಸೆಳೆಯುವಂತೆ ಅರ್ಥಪೂರ್ಣವಾಗಿ ಬಸವ ಸಂಸ್ಕೃತಿ ಅಭಿಯಾನ ನಡೆಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿ ಬಸವಪರ ಸಂಘಟನೆಗಳು ನಿರ್ಧರಿಸಿದೆ.
ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆದ ಅಭಿಯಾನದ ಪೂರ್ವಸಿದ್ಧತಾ ಸಭೆಯಲ್ಲಿ ಈ ಕುರಿತು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಿದ ಪ್ರಯುಕ್ತ ಬಸವ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸಲು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಬಸವಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಅಭಿಯಾನದ ರಥ ಸೆ.೩ರಂದು ಬೀದರ್‌ಗೆ ಬರಲಿದೆ. ವಿದ್ಯಾರ್ಥಿಗಳೊಂದಿಗೆ ಸಂವಾದ, ಬಸವ ಸಂಸ್ಕೃತಿ ಪಥ ಸಂಚಲನ, ಬಹಿರಂಗ ಸಭೆ, `ಜಂಗಮದೆಡೆಗೆ' ನಾಟಕ ಪ್ರದರ್ಶನ, ವಚನ ನೃತ್ಯ, ವಚನ ಸಂಗೀತ ಮೊದಲಾದವನ್ನು ಅಭಿಯಾನ ಒಳಗೊಂಡಿದೆ ಎಂದು ತಿಳಿಸಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ ಹುಲಸೂರು ಮಾತನಾಡಿ, ಬಸವಣ್ಣನವರ ತತ್ವಗಳ ಪ್ರಚಾರಕ್ಕಾಗಿ ಅಭಿಯಾನ ಅವಶ್ಯಕವಾಗಿದೆ. ಇದರ ಯಶಸ್ಸಿಗೆ ಎಲ್ಲರೂ ಕಂಕಣಬದ್ಧರಾಗಿದ್ದೇವೆ ಎಂದರು.
ಕೌಠಾದ ಬಸವ ಯೋಗಾಶ್ರಮದ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಮಾತನಾಡಿ, ಬಸವ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಲು ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ರಾಜೇಂದ್ರಕುಮಾರ ಗಂದಗೆ, ಸುವರ್ಣಾ ಚಿಮಕೋಡೆ, ಮಲ್ಲಮ್ಮ ಆರ್.ಪಾಟೀಲ್ ಮಾತನಾಡಿದರು.
ಬಸವಕಲ್ಯಾಣದ ಬಸವ ಮಹಾಮನೆಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಮಹಾಲಿಂಗ ದೇವರು, ಮಾತೆ ಮೈತ್ರಾದೇವಿ, ಪ್ರಮುಖರಾದ ಜೈರಾಜ ಖಂಡ್ರೆ, ಕುಶಾಲ್ ಪಾಟೀಲ್ ಖಾಜಾಪುರ, ಆನಂದ ದೇವಪ್ಪ, ಚಂದ್ರಕಾಂತ ಶೆಟಕಾರ್, ಕಾಶೀನಾಥ ಶೆಟಕಾರ್, ಶಂಭುಲಿಂಗ ಕಾಮಣ್ಣ, ಉಷಾ ಮಿರ್ಚೆ, ಸುವರ್ಣಾ ಧನ್ನೂರ, ಜಯದೇವಿ ಯದಲಾಪುರೆ, ಡಾ.ವಿಜಯಶ್ರೀ ಬಶೆಟ್ಟಿ, ಸುಮಾ ಭೂಶೆಟ್ಟಿ, ಸುನೀತಾ ದಾಡಗೆ ಇತರರಿದ್ದರು.
ರೇವಣಪ್ಪ ಮೂಲಗೆ, ಕಂಟೆಪ್ಪ ಗಂದಿಗುಡೆ, ನಿರ್ಮಲಾ ಮಸೂದಿ ವಚನ ಗಾಯನ ನಡೆಸಿಕೊಟ್ಟರು. ಮಹಾಸಭಾ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಜೊನ್ನಿಕೇರಿ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಣೆ ಮಾಡಿದರು.
ರಾಜ್ಯಾದ್ಯಂತ ಸೆ.೧ರಿಂದ ಅ.೧ರವರೆಗೆ ಅಭಿಯಾನ ನಡೆಯಲಿದ್ದು, ಪ್ರತಿ ಜಿಲ್ಲೆಯಲ್ಲಿ ಒಂದು ದಿನ ಇರಲಿದೆ. ಅಭಿಯಾನದ ಯಶಸ್ವಿಗೆ ಭರದ ಸಿದ್ಧತೆಗಳು ನಡೆದಿವೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು
ಬಸವ ಸಂಸ್ಕೃತಿ ವಿಶ್ವದ ಶ್ರೇಷ್ಠ ಸಂಸ್ಕೃತಿ. ಅಭಿಯಾನ ಮೂಲಕ ಅದರ ಪ್ರಚಾರದ ಅವಕಾಶ ಒದಗಿಬಂದಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳೋಣ. ಅಭಿಯಾನ ಜಿಲ್ಲೆಯಲ್ಲಿ ಮಾದರಿಯಾಗಿ ನಡೆಸೋಣ.
| ಬಸವರಾಜ ಧನ್ನೂರ
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ