ಜಿಲ್ಲೆ

ಅರ್ಥಪೂರ್ಣ ಬಸವ ಜಯಂತಿ ಆಚರಣೆಗೆ ತೀರ್ಮಾನ

ಹೊಳೆನರಸೀಪುರ: ಭಕ್ತಿ ಭಂಡಾರಿ ಬಸವಣ್ಣ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ತೀರ್ಮಾನಿಸಿತು.

ತಾಲೂಕು ಕಚೇರಿ ಸಭಾಂಗಣದಲ್ಲಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಬಸವಣ್ಣನವರ ಜಯಂತಿ ಆಚರಣೆ ಕುರಿತು ಪೂರ್ವಾಭಾವಿ ಸಭೆ ಏರ್ಪಡಿಸಲಾಗಿತ್ತು.

ತಾಲೂಕು ಕಚೇರಿಯಲ್ಲಿ ವಿಧ್ಯುಕ್ತವಾಗಿ ಏ.30ರಂದು ಆಚರಿಸಲಾಗುತ್ತದೆ. ಬಳಿಕ ವೀರಶೈವ ಸಮುದಾಯದ ನೇತೃತ್ವದಲ್ಲಿ ಮೇ 2ರಂದು ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.

ಮೇ 2ಕ್ಕೆ ಪಟ್ಟಣದ ಬಸವನ ಗುಡಿಯ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಬಸವಣ್ಣನವರ ಭಾವಚಿತ್ರದೊಂದಿಗೆ ತೆರೆದ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಮುಂಭಾಗದ ಸಾರ್ವಜನಿಕ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲು ಸಭೆ ನಿರ್ಣಯ ಕೈಗೊಂಡಿತು.

ಮೆರವಣಿಗೆಯಲ್ಲಿ ಅನೇಕ ಕಲಾ ತಂಡಗಳನ್ನು ಪುರಸಭೆ ನೇತೃತ್ವದಲ್ಲಿ ಭಾಗವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಸವಣ್ಣನವರ ಜಯಂತೋತ್ಸವದಂದು ಸುಮಾರು ಐದು ಸಾವಿರ ಜನರಿಗೆ ಪ್ರಸಾದ ವಿನಿಯೋಗ ಮಾಡಲು ವೀರಶೈವ ಸಮಾಜ ತೀರ್ಮಾನಿಸಿದ್ದು, ಮುಖಂಡ ಸೂರನಹಳ್ಳಿ ಸುರೇಶ್‌ಕುಮಾರ್ ಹಾಗೂ ಹಳೆಕೋಟೆ ಕುಮಾರಸ್ವಾಮಿ ನೇತೃತ್ವದಲ್ಲಿ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಯಿತು.

ಸೂರನಹಳ್ಳಿ ಸುರೇಶ್ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನು ಪಟ್ಟಣದ ಯಾವುದಾದರೂ ವೃತ್ತದಲ್ಲಿ ನಿರ್ಮಿಸುವಂತೆ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಬಸವಣ್ಣನವರ ವೃತ್ತ ಎಂದು ಮಾಡಿಕೊಡಬೇಕು. ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸ್ಮಶಾನ ಇರುವುದಿಲ್ಲ. ಯಾವುದಾದರೂ ಒಂದು ಜಾಗ ಗುರುತಿಸುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಡಿ.ರೇವಣ್ಣ ಅವರು, ರಸ್ತೆಗಳು ವಿಸ್ತರಣೆಯಾಗುತ್ತಿವೆ. ಸಂದರ್ಭ ಬಂದಾಗ ಆ ಮಹಾಪುರುಷರ ವೃತ್ತ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

ವೀರಶೈವ ಮುಖಂಡರಾದ ಜೈ ಶಂಕರ್, ನಿವೃತ್ತ ಪ್ರಾಂಶುಪಾಲ ಎ.ಎಸ್.ಪ್ರಭುಶಂಕರ್ ಮತ್ತಿತರರಿದ್ದರು.