oplus_136314880 
ಜಿಲ್ಲೆ

ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆ

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರ ಬೆಂಬಲದೊಂದಿಗೆ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ಈ ಹಿಂದಿನಿಂದಲೂ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿರುವ ನಾಡು, ನುಡಿ ಕುರಿತ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಬಂದಿದ್ದೇವೆ. ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ವ್ಯಾಪಕವಾಗಿ ಆಚರಣೆಯಾಗಬೇಕು. ಕಚೇರಿಗಳು, ಬ್ಯಾಂಕುಗಳು ಎಲ್ಲಾ ಗ್ರಾಮ ಪಂಚಾಯಿತಿ, ಗಡಿ ಭಾಗಗಳಲ್ಲಿ ರಾಜ್ಯೋತ್ಸವ ಅರ್ಥಪೂರ್ಣವಾಗಿ ಆಗಬೇಕು. ಶಾಲೆಗಳಲ್ಲಿ ಕನ್ನಡ ಜಾಗೃತಿ ಕರ್ಯಕ್ರಮಗಳು ಏರ್ಪಾಡು ಮಾಡಬೇಕು. ವಿವಿಧ ಕ್ಷೇತ್ರಗಳಲ್ಲಿ ದುಡಿದ ಹಾಗೂ ಜಿಲ್ಲೆಯ ಸಾಧಕರನ್ನು ಗೌರವಿಸಬೇಕು ಎಂದರು.

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೇ ನಾಡಗೀತೆಗೆ 100 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಇದರ ಅಂಗವಾಗಿ ಕನ್ನಡ ರಾಜ್ಯೋತ್ಸವ ದಿನದಂದು ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ನಾಡಗೀತೆ ಹಾಡಲು ಸಿದ್ದತೆ ಮಾಡಬೇಕು ಎಂದು ಸಲಹೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬರಲಾಗಿದೆ. ಈ ಬಾರಿಯೂ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವ ಅಚರಣೆಗೆ ಎಲ್ಲ ಸಿದ್ದತೆಗಳನ್ನು ಮಾಡಲಿದ್ದೇವೆ. ವಿವಿಧ ಸಮಿತಿಗಳಿಗೆ ಜವಾಬ್ದಾರಿ ನೀಡಿ ಕಾರ್ಯಕ್ರಮ ನಡೆಸಲಾಗುವುದು. ಎಲ್ಲರ ಸಹಕಾರ ಈ ಹಿಂದಿನಂತೆ ಮುಂದುವರೆಯಲಿ ಎಂದರು.

ನಗರದ ಡಾ. ಬಿ.ಅರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಆಚರಣೆಗೆ ಸಿದ್ದತೆ ಕೈಗೊಳ್ಳಲಾಗುವುದು. ಕನ್ನಡ ನಾಡು, ನುಡಿ ಕುರಿತ ಅಭಿಮಾನದ ಕಾರ್ಯಕ್ರಮಗಳನ್ನು ಶಾಲಾ ಮಕ್ಕಳಿಂದ ಏರ್ಪಾಡು ಮಾಡಲಾಗುವುದು. ಶಿಷ್ಠಾಚಾರ ಅನುಸಾರ ಎಲ್ಲವನ್ನು ಪಾಲನೆ ಮಾಡಲಾಗುತ್ತದೆ. ಕನಿಷ್ಠ 250 ವಿದ್ಯಾರ್ಥಿಗಳಿಂದ ಸಾಮೂಹಿಕವಾಗಿ ನಾಡಗೀತೆ ಹಾಡಿಸಲು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಈಗಿನಿಂದಲೇ ತಾಲೀಮು ನಡೆಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ನವೆಂಬರ್ ತಿಂಗಳ ಯಾವುದಾದರೂ ಒಂದು ದಿನ ಗಡಿ ಭಾಗದ ಗ್ರಾಮದಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಣೆಗೆ ತಹಶೀಲ್ದಾರರು, ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನೂ ಸಹ ಮಾಡಲಾಗುವುದು. ಬ್ಯಾಂಕುಗಳು, ಗ್ರಾಮ ಪಂಚಾಯಿತಿಗಳು, ಕೇಂದ್ರ ಕಚೇರಿ, ವಿಮ ಸಂಸ್ಥೆ ಇನ್ನಿತರ ಸಂಸ್ಥೆಗಳಲ್ಲಿಯೂ ಕನ್ನಡ ರಾಜ್ಯೋತ್ಸವ ಆಚರಿಸಲು ಸೂಚನೆ ನೀಡಲಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಪ್ರಧಾನವಾಗಿ ನಾಮಫಲಕ ಅಳವಡಿಸಿರುವ ಬಗ್ಗೆ ಹಾಗೂ ಕಟ್ಟುನಿಟ್ಟಿನ ಪರಿಶೀಲನೆಗಾಗಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಸುರೇಶ್ ನಾಯಕ, ಮಹದೇವಶೆಟ್ಟಿ, ಅರಕಲವಾಡಿ ನಾಗೇಂದ್ರ, ಚಾ.ಗು.ನಾಗರಾಜು, ಸಿ.ಎಂ. ಕೃಷ್ಣಮೂರ್ತಿ, ಸುರೇಶ್ ವಾಜಪೇಯಿ, ಸಿ.ಎಂ. ನರಸಿಂಹಮೂರ್ತಿ, ಜಿ. ಬಂಗಾರು, ಪಣ್ಯದಹುಂಡಿ ರಾಜು, ಮಹೇಶ್, ಶಿವಶಂಕರ್, ನಟರಾಜು, ಶಿವಣ್ಣ, ಜ. ಸುರೇಶ್ ನಾಗ್, ಬ್ಯಾಡಮೂಡ್ಲು ಬಸವಣ್ಣ, ಮಹದೇವಸ್ವಾಮಿ, ಬಂಗಾರನಾಯಕ, ಸಿದ್ದರಾಜು, ಎಲ್. ಸುರೇಶ್, ಹೊಸೂರು ಶಿವಣ್ಣ ಇತರರು ಹಾಜರಿದ್ದರು.