ಎಚ್.ಡಿ.ಕೋಟೆ: ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಪಕ್ಷ ನಿಷ್ಠೆ, ಸರಳತೆ, ಸಮಯ ಪಾಲನೆ ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಆಯೋಜಿಸಿದ್ದ ದಿ.ಆರ್.ಧ್ರುವನಾರಾಯಣ ಅವರ 62ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ರಾಜ್ಯದಲ್ಲಿ ಬಹುಮತ ಬಂದು ಅಧಿಕಾರ ಹಿಡಿಯಲು ಧ್ರುವನಾರಾಯಣ ಅವರ ಪರಿಶ್ರಮ ಕಾರಣ. ಅಲ್ಲದೆ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಆಗಲು ಅವರ ಮಾರ್ಗದರ್ಶನವೇ ಕಾರಣ. ಆದರೆ ಅವರ ಜತೆ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ನಾನು ಕಳೆದುಕೊಂಡಿದ್ದೇನೆ ಎಂದರು.
ಇಂದು ಈ ರೀತಿ ಅವರ ಜನ್ಮದಿನವನ್ನು ಆಚರಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಧ್ರುವನಾರಾಯಣ ಅವರ ಪ್ರತಿರೂಪವಾಗಿ ಅವರ ಮಗ ದರ್ಶನ್ ನಡೆದುಕೊಳ್ಳುತ್ತಿದ್ದಾರೆ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ನೆನಪಿಸಿಕೊಳ್ಳುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ನಂಜನಗೂಡು ಶಾಸಕ ದರ್ಶನ ಧ್ರುವನಾರಾಯಣ ಮಾತನಾಡಿ, ತಂದೆಯ ನೆನಪಿನಲ್ಲಿ ಪ್ರತಿ ಕ್ಷಣವೂ ಇದ್ದೇವೆ. ಅವರು ಸದಾಕಾಲವೂ ನಮಗೆ ದಾರಿದೀಪ ಆಗಿದ್ದಾರೆ. ಅವರು ಎಂದೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಜೀವನ ಪರ್ಯಾಂತ ಜನಸೇವೆ ಮಾಡಿಕೊಂಡು ಬಂದರು. ನಾವು ಕೂಡ ಅವರ ಮಾರ್ಗದರ್ಶನದಲ್ಲಿ ಸಾಗೋಣ. ಎಚ್.ಡಿ.ಕೋಟೆ ಎಂದರೆ ನಮ್ಮ ತಂದೆಗೆ ಅಚ್ಚುಮೆಚ್ಚು. ಅವರ ರೀತಿಯಲ್ಲಿ ನಾನೂ ತಾಲೂಕಿನ ಕಾರ್ಯಕ್ರಮಗಳಲ್ಲಿ ಬಿಗಿಯಾಗಿ ಜನಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಧ್ರುವನಾರಾಯಣ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ, ಧ್ರುವನಾರಾಯಣ ಅವರು ಚುನಾವಣೆಯಲ್ಲಿ ಸೋತ ನಂತರ ಅವರ ಜತೆ ಇದ್ದೀವಿ. ಅವರ ಹೆಸರಿನಲ್ಲಿ ಅಭಿಮಾನಿ ಬಳಗ ಕಟ್ಟಿಕೊಂಡು ಕಳೆದ ಐದು ವರ್ಷಗಳಲ್ಲಿ ತಾಲೂಕಿನ ಸುಮಾರು 27 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇವೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಚಿಕಿತ್ಸೆ, 113 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಕಟ್ಟಿದ್ದೇವೆ, ರಕ್ತದಾನ ಶಿಬಿರ ಹಾಗೂ ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ದೈಹಿಕವಾಗಿ ಧ್ರುವನಾರಾಯಣ ಅವರನ್ನು ಕಳೆದುಕೊಂಡರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ಎಂದು ದೃಢನಿರ್ದಾರ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೆವಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಸುಭಾಷ್, ನಿರಂಜನ್ ನೇತೃತ್ವದಲ್ಲಿ ಡಾ.ಪೂರ್ವಿತಾ, ಡಾ.ಅಖಿಲಾ, ಡಾ.ತೇಜಸ್ವಿನಿ, ಡಾ.ಹರ್ಷಿತಾ ಅವರು ತಪಾಸಣೆ ನಡೆಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಧಿರಾಜ್ ಧ್ರುವನಾರಾಯಣ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಡಿ.ಸುಂದರ್ ದಾಸ್, ನಂದಿನಿ ಚಂದ್ರಶೇಖರ್, ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಪುರದಕಟ್ಟೆ ಬಸವರಾಜು, ಶಂಬುಲಿಂಗನಾಯಕ, ಭಾಗ್ಯಲಕ್ಷ್ಮೀ, ಚಿಕ್ಕವೀರನಾಯಕ, ಪಿ.ರವಿ, ಶಿವಪ್ಪಕೋಟೆ, ಅಶೋಕ್, ನವೀನ್ ಗೌಡ, ನಯಾಜ್, ಈರೇಗೌಡ, ಸತೀಶ್ ಗೌಡ, ಪ್ರದೀಪ್, ಸೋಮೇಶ್, ರಾಜು ವಿಶ್ವಕರ್ಮ, ಪಿ.ನಾಗರಾಜು, ವನಸಿರಿ ಶಂಕರ್, ಕಂದೇಗಾಲ ಶಿವರಾಜು, ಪ್ರಕಾಶ್ ಬುದ್ಧ, ಶಂಭು, ಮಧುಕುಮಾರ್, ಹೈರಿಗೆ ಮಲ್ಲೇಶ್, ಮಂಜು ಮುಳ್ಳೂರು, ನಂದೀಶ್, ಉಮೇಶ್ ವನಸಿರಿ, ಪ್ರಕಾಶ್ ಸ್ಟೂಡಿಯೋ ಇದ್ದರು.