ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ನಿಗದಿ ಆಂದೋಲನವನ್ನು ಸುಂಟಿಕೊಪ್ಪ ನಾಡಕಚೇರಿ ವತಿಯಿಂದ ಗುರುವಾರ ಏರ್ಪಡಿಸಲಾಗಿತ್ತು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್‌ಗೌರಯ್ಯ ಮಾತನಾಡಿ, ಕೃಷಿ ಭೂಮಿ ಸೇರಿದಂತೆ ಭೂಮಾಲೀಕರ ಹಕ್ಕುದಾರರು ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಸಂಬಂಧಿಸಿದ ಇಲಾಖೆಯ ಮೂಲಕ ಪ್ರತಿ ಗ್ರಾಮಗಳಿಗೆ ಅಕಾರಿಗಳೇ ತೆರಳಿ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಕೃಷಿಕರು ಮತ್ತು ಭೂ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮೂಲ ದಾಖಲಾತಿಗಳನ್ನು ನೀಡುವ ಸಮಸ್ಯೆಗೆ ಪರಿಹಾರ ಒದಗಿಸಿಕೊಡಲಾಗುವುದು. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.
ಸರ್ವೇ ವಿಭಾಗದ ಮುಖ್ಯಾಧಿಕಾರಿ ಮಹೇಶ್ ಅವರು ಗ್ರಾಮಸ್ಥರಿಗೆ ಸರ್ವೇ ಇಲಾಖೆಯ ವತಿಯಿಂದ ಕೃಷಿ ಹಾಗೂ ಭೂ ಮಾಲೀಕರು ಹಕ್ಕುದಾರರಿಗೆ ಆಂದೋಲನದ ಸದುದ್ದೇಶ ತಿಳಿಸಿಕೊಟ್ಟರು.
ಸುಂಟಿಕೊಪ್ಪ ಉಪ ತಹಸೀಲ್ದಾರ್ ಶಿವಪ್ಪ, ಸರ್ವೇಯರ್‌ಗಳಾದ ಶ್ರೀನಿವಾಸ್, ಸಿದ್ದರಾಜು, ಸಹಾಯಕ ಗುರು, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿ ಜಯಂತ್, ನಸೀಮ, ಗ್ರಾಮ ಸಹಾಯಕ ಶಿವಪ್ಪ ಇತರರು ಇದ್ದರು.