ಮೈಸೂರು: ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಕೆಗೆ ಆಫ್‌ಲೈನ್ ಬದಲಾಗಿ ಆನ್‌ಲೈನ್ ಪದ್ಧತಿ ಜಾರಿಗೊಳಿಸಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ವೀರ ಕೇಸರಿ ಪಡೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಅಂಬೇಡ್ಕರ್, ವಾಲ್ಮೀಕಿ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮಗಳಿಂದ ನೀಡುವ ನೇರಸಾಲ, ಹೈನುಗಾರಿಕೆ, ಸರಕು ವಾಹನಗಳ ಖರೀದಿ ಇನ್ನಿತರ ಸಾಲ ಸೌಲಭ್ಯ ಹಂಚಿಕೆಯಲ್ಲಿ ಈ ಹಿಂದೆ ತಾಲೂಕುವಾರು ಭೌತಿಕ ಗುರಿ ನೀಡಲಾಗುತ್ತಿತ್ತು. ಈಗ ಇದರಲ್ಲೂ ಕಡಿತಗೊಳಿಸುವ ಮೂಲಕ ಪರಿಶಿಷ್ಟ, ಹಿಂದುಳಿದ ವರ್ಗದವರಿಗೆ ದ್ರೋಹ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಫಲಾನುಭವಿಗಳ ವಯೋಮಿತಿಯನ್ನು 60ರಿಂದ 50 ವರ್ಷಕ್ಕೆ ನಿಗದಿಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ನಿಗಮಕ್ಕೆ ಸಾಲ ಸೌಲಭ್ಯಕ್ಕಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸುವ ಅವಕಾಶವಿತ್ತು. ಆದರೀಗ ಆಫ್‌ಲೈನ್ ಪದ್ಧತಿಯನ್ನು ರದ್ದುಗೊಳಿಸಿ, ಆನ್‌ಲೈನ್ ಅರ್ಜಿ ಮಾತ್ರ ಸ್ವೀಕಾರ ಮಾಡಲಾಗುತ್ತಿದೆ. ಅವಿದ್ಯಾವಂತ ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ತಿಳಿಯದೆ ಕಂಪ್ಯೂಟರ್ ಕೇಂದ್ರಗಳಿಗೆ ಅಲೆಯುವಂತಾಗಿದೆ. ಅಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಅರ್ಜಿ ಸಲ್ಲಿಸಲಾಗದೆ ಹಣ ಕಳೆದುಕೊಳ್ಳುವಂತಹ ಸ್ಥಿತಿಯನ್ನು ಸರ್ಕಾರ ತಂದಿಟ್ಟಿದೆ ಎಂದು ಕಿಡಿಕಾರಿದರು.
ಸಾಲ ಸೌಲಭ್ಯದ ನಿರೀಕ್ಷೆಯಲ್ಲಿ ಪರಿಶಿಷ್ಟ, ಒಬಿಸಿ ಫಲಾನುಭವಿಗಳ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ದಲಿತರ, ಹಿಂದುಳಿದ ವರ್ಗ ಶ್ರೇಯೋಭಿವೃದ್ಧಿಗಾಗಿ ರಚನೆಗೊಂಡ ನಿಗಮಗಳು ಮುಚ್ಚುವ ಸ್ಥಿತಿಗೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಲ ಸೌಲಭ್ಯ ವಿಚಾರದಲ್ಲಿ ಕಡಿತಗೊಳಿಸಿರುವ ಭೌತಿಕ ಗುರಿಯನ್ನು ಹೆಚ್ಚಿಸಬೇಕು. ಆನ್‌ಲೈನ್ ಬದಲಿಗೆ ನೇರವಾಗಿ ಅರ್ಜಿ ಸ್ವೀಕಾರ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ನಾಗನಹಳ್ಳಿ ಎಂ.ರೇವಣ್ಣ, ಮಹದೇವ ಟೈಲರ್, ಬಿ.ನಾಗರಾಜ್, ಗೋಪಾಲ್, ಶ್ರೀನಿವಾಸ್, ಶ್ರೀಕಂಠು, ಚಂದ್ರು, ನಾಗರಾಜು, ರಾಮನಾಯಕ್ ಜೆ. ಹೊಸಕೋಟೆ, ಮಧುವನ ಚಂದ್ರು ಇನ್ನಿತರರು ಇದ್ದರು.