ಕಲಬುರಗಿ: ಸಕಾಲ, ಐಪಿಜಿಆರ್‌ಎಸ್, ಸಿ.ಪಿ.ಗ್ರಾಮ್ಸ್, ಸಿಎಂ ಜನಸ್ಪಂದನ, ಜನತಾ ದರ್ಶನ ಕೋಶ ಹಾಗೂ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿರುವ ಕಲಬುರಗಿ ಕನೆಕ್ಟ್ ವೆಬ್ ಮೂಲಕ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆ ಅರ್ಜಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಜಿಲ್ಲಾ ಮಟ್ಡದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಸಾರ್ವಜನಿಕರು ಅನಗತ್ಯ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕಾದರೆ ಸಕಾಲದಲ್ಲಿ ಅರ್ಜಿ ವಿಲೇವಾರಿ ಮಾಡುವುದು ತುಂಬಾ ಮುಖ್ಯ. ಸಕಾಲ ಯೋಜನೆಯಡಿ ವಿಳಂಬ ಮಾಡಿದಲ್ಲಿ ಅಧಿಕಾರಿ-ನೌಕರರಿಗೆ ದಂಡ ಬೀಳಲಿದೆ. ಇದನ್ನರಿತು ಕೆಲಸ ಮಾಡಿ ಎಂದರು.
ಯಾವುದೇ ಕುಂದುಕೊರತೆ ಅರ್ಜಿ ತಮ್ಮ ಹಂತದಲ್ಲಿ ನಿಯಮಾನುಸಾರ ಪರಿಹಾರ ನೀಡಬಹುದಾರೆ ತಕ್ಷಣ ನೀಡಬೇಕು. ಕಾನೂನಾತ್ಮಕವಾಗಿ ಇಲ್ಲದಿದ್ದಲ್ಲಿ ಸಕಾರಣದೊಂದಿಗೆ ಅರ್ಜಿದಾರರಿಗೆ ಹಿಂಬರಹ ಕೊಡಬೇಕು. ಮೇಲಧಿಕಾರಿಗಳ ಹಂತದಲ್ಲಿ ಪರಿಹರಿಸುವ ಅರ್ಜಿ ಇದ್ದಲ್ಲಿ ಅದನ್ನು ಸಂಬAಧಿಸಿದವರಿಗೆ ಕಳುಹಿಸಿ ಅರ್ಜಿದಾರರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಎಸ್‌ಸಿಪಿ-ಟಿಎಸ್‌ಪಿ ಪ್ರಗತಿ ಪರಿಶೀಲನೆ
ಈ ಸಂದರ್ಭದಲ್ಲಿ ೨೦೨೩-೨೪ನೇ ಸಾಲಿನ ವಿಶೇಷ ಘಟಕ ಯೋಜನೆ- ಗಿರಿಜನ ಉಪ ಯೋಜನೆಯಡಿ ಕುರಿತು ವಿವಿಧ ಇಲಾಖೆಗೆ ಹಂಚಿಕೆಯಾದ ಅನುದಾನ, ಖರ್ಚು ಕುರಿತು ಪ್ರಗತಿ ಪರಿಶೀಲಿಸಿದ ಡಿಸಿ ಅವರು, ಆಯಾ ಇಲಾಖೆಗೆ ಪರಿಶಿಷ್ಟರ ಕಲ್ಯಾಣಕ್ಕಾಗಿ ಜಿಲ್ಲಾ ಮತ್ತು ರಾಜ್ಯ ವಲಯದಿಂದ ಹಂಚಿಕೆಯಾಗಿರುವ ಅನುದಾನವನ್ನು ಎಸ್‌ಸಿ-ಎಸ್‌ಟಿ ಸಮುದಾಯದ ಶ್ರೇಯೋಭಿವೃದ್ಧಿಗೆ ಕಾಲಮಿತಿಯಲ್ಲಿ ಖರ್ಚು ಮಾಡಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ಜಿಲ್ಲೆಯಲ್ಲಿ ಈವರೆಗೆ ಇಲಾಖಾವಾರು ಆಗಿರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಕುರಿತು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇತರರು ಇದ್ದರು.