ಜಿಲ್ಲೆ

ಅರ್ಜಿ ಆಹ್ವಾನಿಸಲು ಪಾಲಿಕೆ ಆಯುಕ್ತರಿಂದ ವಿಳಂಬ

ಹುಬ್ಬಳ್ಳಿ: ಅವಳಿ ನಗರದಲ್ಲಿ ಆಗಸ್ಟ್ 15ರೊಳಗೆ ವಾರ್ಡ್ ಸಮಿತಿಗಳನ್ನು ರಚಿಸಬೇಕಿದೆ. ಈ ಕುರಿತು ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ಯಾಕೆ ವಿಳಂಬ ಮಾಡುತ್ತಿದ್ದಾರೆಂಬುದು ಗೊತ್ತಾಗುತ್ತಿಲ್ಲ. ತಕ್ಷಣ ಅವರು ಅರ್ಜಿ ಅಹ್ವಾನಿಸಬೇಕು ಎಂದು ಜನಾಗ್ರಹ ಸಂಸ್ಥೆಯ ನಾಗರಿಕರ ಸಹಭಾಗಿತ್ವ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸಂತೋಷ ನರಗುಂದ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 26ರಂದು ಕರೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 15ರೊಳಗೆ ವಾರ್ಡ್ ಸಮಿತಿಗಳನ್ನು ರಚಿಸಬೇಕೆಂದು ಮೇಯರ್ ಆದೇಶಿಸಿದ್ದಾರೆ. ಇಷ್ಟರೊಳಗೆ ಪಾಲಿಕೆ ಆಯುಕ್ತರು ಅರ್ಜಿ ಆಹ್ವಾನಿಸಿರಬೇಕಿತ್ತು ಎಂದು ಹೇಳಿದರು.

ವಾರ್ಡ್ ಸಮಿತಿ ಸಂಬಂಧ ರಚಿಸಲಾದ ಪಾಲಿಕೆಯ ಸದನ ಸಮಿತಿಯು ಬಹಳಷ್ಟು ವಿಳಂಬ ಮಾಡಿ ವರದಿ ಸಲ್ಲಿಸಿದೆ. ವರದಿಯಲ್ಲಿ ಕೆಲವು ಶರತ್ತುಗಳನ್ನು ವಿಧಿಸಲಾಗಿದೆ. ಆಡಳಿತವು ಸುಗಮವಾಗಿ ನಡೆದುಕೊಂಡು ಹೋಗಲು ನಾಗರಿಕರ ಸಹಭಾಗಿತ್ವ ಮುಖ್ಯವಾಗುತ್ತದೆ. ವಾರ್ಡ್ ಸಮಿತಿ ಸದಸ್ಯರಿಂದ ಪಾಲಿಕೆ ಸದಸ್ಯರಿಗೆ, ಅಧಿಕಾರಿಗಳಿಗೆ ಅಡೆತಡೆ ಉಂಟಾಗುತ್ತದೆ ಎಂಬ ಭಾವನೆ ಸರಿಯಲ್ಲ ಎಂದರು.

ಈ ಹಿಂದೆ ಪಾಲಿಕೆಯು ಸೂಕ್ತ ಪ್ರಚಾರ ಮಾಡದಿದ್ದರಿಂದ ವಾರ್ಡ್ ಸದಸ್ಯರ ಸಂಖ್ಯೆಗಿಂತ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಬಾರಿ ಪಾಲಿಕೆ ಹೆಚ್ಚು ಪ್ರಚಾರ ಕೈಗೊಂಡರೆ ಸುಮಾರು 2 ಸಾವಿರ ಅರ್ಜಿಗಳು ಬರುವ ವಿಶ್ವಾಸವಿದೆ ಎಂದು ಹೇಳಿದರು.