ಬೇಲೂರು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣ ಶಿಬಿರದಲ್ಲಿ ವೈದ್ಯರು ಮತ್ತು ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಭಾಗವಹಿಸಿದ್ದರು. 
ಜಿಲ್ಲೆ

ಅರೇಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ

ಬೇಲೂರು: ತಾಲೂಕಿನ ಅರೇಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಯನ್ಸ್ ಸಂಸ್ಥೆ, ಬೆಂಗಳೂರಿನ ಡಾ.ಎಸ್.ಆರ್ ಚಂದ್ರಶೇಖರ್ ವಾಕ್ ಮತ್ತು ಶ್ರವಣ ಸಂಸ್ಥೆ, ಲಯನ್ಸ್ ಕ್ಲಬ್ ಸಹಯೋಗದಲ್ಲಿ ವಾಕ್ ಮತ್ತು ಶ್ರವಣ ದೋಷವಿರುವವರಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಉಚಿತ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಅರೇಹಳ್ಳಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಚಾಮರಾಜ್ ಮಾತನಾಡಿ, ವಾಕ್ ಹಾಗೂ ಶ್ರವಣ ದೋಷವಿರುವ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಭಾಷೆಯ ಸಮಸ್ಯೆ, ಕಲಿಕಾ ತೊಂದರೆ, ಕಿವಿ ನೋವು ಹಾಗೂ ಸೋರುವಿಕೆ, ಸೀಳು ತುಟಿ, ಪಾರ್ಶ್ವವಾಯು, ಬುದ್ಧಿ ಮಾಂದ್ಯತೆ, ಧ್ವನಿಯಲ್ಲಿ ಏರುಪೇರು ಹೀಗೆ ಹಲವು ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರೀಕ್ಷೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವವರಿಗೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದು ಎಂದರು.

ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಕೆ.ಎನ್.ಸಂತೋಷ್, ಖಜಾಂಚಿ ಪೃಥ್ವಿರಾಜ್, ವಲಯಾಧ್ಯಕ್ಷ ರಾಬಿ ಸೋಮಯ್ಯ, ಪೊಲೀಸ್ ಉಪನಿರೀಕ್ಷಕ ಸುರೇಶ್, ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ, ಗ್ರಾಪಂ ಸದಸ್ಯ ಮಹೇಶ್‌ಶೆಟ್ಟಿ ಸೇರಿದಂತೆ ಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಇದ್ದರು.