ಜಿಲ್ಲೆ

ಅರೇಹಳ್ಳಿ ಗ್ರಾಮಸ್ಥರಿಂದ ಮೌನ ಮೆರವಣಿಗೆ

ಬೇಲೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡ ಖಂಡಿಸಿ ಶನಿವಾರ ರಾತ್ರಿ ತಾಲೂಕಿನ ಅರೇಹಳ್ಳಿಯಲ್ಲಿ ಗ್ರಾಮಸ್ಥರು ಮೌನ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್‌ಕುಮಾರ್ ಶೆಟ್ಟಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ಭೀಕರ ಹತ್ಯಾಕಾಂಡ ಖಂಡನೀಯವಾಗಿದ್ದು, ಇದಕ್ಕೆ ಕಾರಣರಾದ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಕೈಗೊಳ್ಳಲಿದೆ ಎಂದರು.

ಕೇವಲ ಧರ್ಮದ ಆಧಾರದ ಮೇಲೆ ಹತ್ಯಾಕಾಂಡ ನಡೆದಿರುವುದು ಹೇಯ ಕೃತ್ಯವಾಗಿದೆ. ಹಿಂದು ಧರ್ಮದ ಮೇಲೆ ನಡೆದಿರುವ ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಇತ್ತೀಚೆಗೆ ಕಾಶ್ಮೀರದಲ್ಲಾದ ಸ್ಥಿತಿ ಭಾರತದ ಇತರ ಭಾಗಗಳಲ್ಲೂ ನಡೆಯಬಹುದು. ಆದ್ದರಿಂದ ಪಕ್ಷಭೇದ, ಜಾತಿ ಭೇದ ಮರೆತು ಎಲ್ಲರೂ ಒಂದಾಗಿ ಇಂತಹ ನೀಚ ಕೃತ್ಯವನ್ನು ಖಂಡಿಸಬೇಕು. ಭಯೋತ್ಪಾದನೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನವನ್ನು ವಿಶ್ವದ ಭೂಪಟದಲ್ಲಿ ಕಾಣದಂತೆ ಪ್ರಧಾನಿ ಅವರು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಗ್ರಾಮಸ್ಥರಾದ ಚಂದನ್, ಶ್ರೀನಿವಾಸಶೆಟ್ಟಿ, ಚಿದಾನಂದ, ಮಹೇಶ್‌ಶೆಟ್ಟಿ, ಯೋಗೇಶ್, ಜಗದೀಶ್, ಚಂದ್ರುಶೆಟ್ಟಿ, ಭರತ್, ಸಚಿನ್ ರೈ, ಮಂಜುನಾಯಕ್, ನಾರಾಯಣ, ಮೋಹನ್, ಬಸವರಾಜ್ ಮತ್ತಿತರರಿದ್ದರು.