ಚಿತ್ರದುರ್ಗ: ಮನೆ ನಿರ್ಮಾಣದ ಪರವಾನಗಿಗೆ ಲಂಚ ಸ್ವೀಕರಿಸುತ್ತಿದ್ದ ಹೊಳಲ್ಕೆರೆ ತಾಲೂಕು ಅರೇಹಳ್ಳಿ ಗ್ರಾಪಂ ಪಿಡಿಒ ಜಿ. ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಕೈಗೆ ಬುಧವಾರ ಗ್ರಾಪಂ ಕಚೇರಿಯಲ್ಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಗ್ರಾಪಂ ವ್ಯಾಪ್ತಿಯ ಜೈಪುರದಲ್ಲಿ ಮನೆ ನಿರ್ಮಿಸಲು ಲೈಸೆನ್ಸ್ ಕೊಡುವಂತೆ ಕೋರಿ ಹೊಳಲ್ಕೆರೆಯ ಎನ್. ಮನೋಜ್ ಕಳೆದ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಆದರೆ, ಲೈಸೆನ್ಸ್ ಕೊಡದೆ ಅವರನ್ನು ಪದೆ ಪದೇ ಕಚೇರಿಗೆ ಅಲೆದಾಡಿಸಲಾಗುತ್ತಿತ್ತು. ಗ್ರಾಪಂ ಅಧ್ಯಕ್ಷ ಪಾಲೇನಗೌಡ್ರು ಸೂಚಿಸಿದ್ದರೂ ಪರವಾನಗಿ ಕೊಟ್ಟಿರಲಿಲ್ಲ. ಕಳೆದ ಆಗಸ್ಟ್ 28ರಂದು ಗ್ರಾಪಂ ಕಚೇರಿಗೆ ಮನೋಜ್ ತೆರಳಿ ವಿಚಾರಿಸಿದಾಗ ಪಿಡಿಒ 15 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ 10 ಸಾವಿರ ರೂ.ಗೆ ಒಪ್ಪಿ, ಆಗಸ್ಟ್ 29 ರಂದು 5 ಸಾವಿರ ರೂ. ಪಡೆದಿದ್ದರು. 5 ಸಾವಿರ ರೂ.ಗಳನ್ನು ಕೊಟ್ಟು ಲೆಸೆನ್ಸ್ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು. ಈ ಲಂಚದ ಬೇಡಿಕೆ ಕುರಿತಾದ ಆಡಿಯೋ, ವಿಡಿಯೊ ರೆಕಾರ್ಡ್‌ನೊಂದಿಗೆ ಮನೋಜ್ ಲೋಕಾಯುಕ್ತರ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಕಚೇರಿಯಲ್ಲೇ 5 ಸಾವಿರ ರೂ. ಸ್ವೀಕರಿಸುತ್ತಿದ್ದಾಗ ಆರೋಪಿ ಪಿಡಿಒ ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಇನ್‌ಪೆಕ್ಟರ್ ಬಿ. ಮಂಜುನಾಥ್, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಎನ್. ಮೃತ್ಯಂಜಯ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮುಷ್ತಾಕ್ ಅಹಮ್ಮದ್ ಡಿ.ಶೇಖ್, ಬಸವರಾಜ ಬಿ. ಲಮಾಣಿ ಮತ್ತವರ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ತಿಳಿಸಿದ್ದಾರೆ.