ಬುಧವಾರ ರಾತ್ರಿ ಹುತ್ತರಿ ಹಬ್ಬದ ಪ್ರಯುಕ್ತ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಪ್ರಮುಖರು ಸಮಾಜದ ಸಂಪ್ರದಾಯದಂತೆ ಗದ್ದೆಯಲ್ಲಿ ಕದಿರು ತೆಗೆದು ಅದನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಬರಲಾಯಿತು. 
ಜಿಲ್ಲೆ

ಅರೆಭಾಷೆ ಗೌಡ ಸಮಾಜದಿಂದ ಹುತ್ತರಿ ಹಬ್ಬ ಆಚರಣೆ

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜ ವತಿಯಿಂದ ಬುಧವಾರ ರಾತ್ರಿ ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಅರೆಭಾಷೆ ಗೌಡ ಸಮಾಜದ ಬಾಂಧವರು ಹಾಗೂ ಇತರ ಸಮುದಾಯದವರು ಹುತ್ತರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ಬುಧವಾರ ರಾತ್ರಿ 8 ಗಂಟೆಗೆ ಅರೆಭಾಷೆ ಗೌಡ ಸಮುದಾಯದ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಆಲೂರು ಸಿದ್ದಾಪುರ ಸಮೀಪದ ಕಡ್ಲೆಮಕ್ಕಿ ಗ್ರಾಮದ ಬೈಮನ ಕಾಂತಿ ಚಂಗಪ್ಪ ಎಂಬುವರ ಸೇರಿದ ಗದ್ದೆಯಲ್ಲಿ ಕದಿರು(ಭತ್ತದ ಬೆಳೆಯ ತೆನೆ) ತೆಗೆಯಲು ಹೊರಟರು. ಭತ್ತದ ಗದ್ದೆಯಲ್ಲಿ ಹುತ್ತರಿ ಹಬ್ಬದ ಸಂಪ್ರದಾಯದಂತೆ ಪೂಜೆ ನೆರವೇರಿಸಿದ ಬಳಿಕ ಕದಿರು ತೆಗೆದರು.
ನಂತರ ಗದ್ದೆಯಲ್ಲಿ ತೆಗೆದ ಕದಿರನ್ನು ಆಲೂರು ಸಿದ್ದಾಪುರ ಶ್ರೀಬಸವೇಶ್ವರ ದೇವಸ್ಥಾನದಲ್ಲಿಟ್ಟು ಅದನ್ನು ಹುತ್ತರಿ ಹಬ್ಬದ ಪದ್ಧತಿಯಂತೆ ಸಾಮೂಹಿಕವಾಗಿ ನೆರೆ ಕಟ್ಟಿದರು. ನಂತರ ದೇವಸ್ಥಾನದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು.
ಕೊನೆಯಲ್ಲಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಕಟ್ಟಿದ ಕದಿರು ನೆರೆಯನ್ನು ಸಮಾಜದ ಬಾಂಧವರು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು. ಹುತ್ತರಿ ಹಬ್ಬದ ಪ್ರಯುಕ್ತ ದೇವಸ್ಥಾನದಲ್ಲಿ ಎಲ್ಲರೂ ಸಿಹಿ ಭೋಜನ ಸವಿದರು.
ಹುತ್ತರಿ ಹಬ್ಬದ ಸಂಭ್ರಮದಲ್ಲಿ ಇತರ ಸಮುದಾಯದ ಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು. ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಎಡಕೇರಿ ಜಯರಾಮ್ ನೇತೃತ್ವದಲ್ಲಿ ನಡೆದ ಹುತ್ತರಿ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಉಡುದೋಳಿರ ನಂದ, ಪರ್ಲಕೋಟಿ ಸತೀಶ್, ಕರ್ಕನ ಪೆಮ್ಮಯ್ಯ, ಹೊಸೂರು ಶಿವಪ್ರಕಾಶ್, ಎಡಕೇರಿ ಲೀಲಾವತಿ, ಹೊಸೂರು ಸರಿತಾ ಶಿವಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.