ಹೈದರ್ ಕುಂದಾಣ
ಕೆಲದಿನಗಳ ಹಿಂದೆ ಆರಂಭವಾಗಿದ್ದ ಕುಂದಾಣದಿಂದ ಗಂಟಿಗಾನಹಳ್ಳಿ ಕ್ರಾಸ್‌ವರಗಿನ 13.5 ಕಿಮೀ ರಸ್ತೆಯ ಅಭಿವೃದ್ಧಿ ಕಾಮಗಾರಿ ಅರೆಬರೆಯಾಗಿದ್ದು, ಸುರಕ್ಷಿತ ವಾಹನ ಸಂಚಾರಕ್ಕೆ ಭಾರಿ ಕುತ್ತು ತಂದಿಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಪ್ರದೇಶದಿಂದ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ (ಎಂಡಿಆರ್) ಅಭಿವೃದ್ಧಿ ಕಾಮಗಾರಿಯನ್ನು ಕರೊನಾ ಲಾಕ್‌ಡೌನ್ ತೆರವಾದ ನಂತರದಲ್ಲಿ ಆರಂಭಿಸಲಾಗಿತ್ತು. 2020ರ ಜೂ.19ರಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, 8 ತಿಂಗಳಿಂದ ಕಾಮಗಾರಿ ವಿಳಂಬವಾಗಿದೆ. ರಸ್ತೆ ಅಭಿವೃದ್ಧಿಗಾಗಿ ಅಲ್ಲಲ್ಲಿ ಅಗೆದು ಮಣ್ಣಿನ ರಾಶಿ ಹಾಕಿರುವುದರಿಂದ, ವಾಹನ ಸಂಚಾರಕ್ಕೆ ಭಾರಿ ತೊಡಕು ಉಂಟಾಗುತ್ತಿದೆ.
21 ಕೋಟಿ ರೂ. ಯೋಜನೆ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ರಸ್ತೆ ವಿಸ್ತರಣೆಗಾಗಿ 21 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ರಸ್ತೆಯ ನಿರ್ವಹಣೆಯನ್ನು ಎರಡು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಆದರೆ ಇಲಾಖೆ ರಸ್ತೆ ಅಭಿವೃದ್ಧಿ ನಿರ್ಲಕ್ಷಿಸಿರುವ ಕಾರಣ, ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಸಂಚಾರ ದುಸ್ತರವಾಗುತ್ತಿದೆ. ನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ.
ತಪ್ಪದ ಸರ್ಕಸ್: ರಸ್ತೆಯನ್ನು ಅಗೆದಿರುವ ಕಾರಣ ನಿತ್ಯಸಂಚಾರಕ್ಕಾಗಿ ಈ ರಸ್ತೆಯನ್ನೇ ಅವಲಂಬಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಿಬ್ಬಂದಿ, ಅಧಿಕಾರಿಗಳು ಮತ್ತು ಸಾರ್ವಜನಿಕರು, ಬೆಂಗಳೂರಿಗೆ ತೆರಳುವ ಜನರು, ಶಾಲೆಗಳಿಗೆ ತೆರಳುವ ಮಕ್ಕಳು ಸರ್ಕಸ್ ಮಾಡಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂಚರಿಸಿದಂತೆಲ್ಲ ಧೂಳು ಎದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ವಿದ್ಯುತ್‌ಲೈನ್‌ಗಳಿಂದ ಅಡಚಣೆ: ರಸ್ತೆ ಇರುವೆಡೆಯೇ ನೆಲದಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಿದೆ. ಇದನ್ನು ತೆರವುಗೊಳಿಸದೇ ಇರುವುದರಿಂದ, ಕಾಮಗಾರಿಗೆ ಅಡ್ಡಿ ಉಂಟಾಗುತ್ತಿದೆ. ಈ ಮಾರ್ಗದ ಸ್ಥಳಾಂತರಕ್ಕಾಗಿ ಬೆಸ್ಕಾಂನವರು 6 ಕೋಟಿ ರೂ. ವೆಚ್ಚ ಭರಿಸುವಂತೆ ಪಟ್ಟು ಹಿಡಿದಿದ್ದಾರೆ. ರಸ್ತೆ ಅಭಿವೃದ್ಧಿಗೆ ಒದಗಿಸಿರುವ ಅನುದಾನ ಕಡಿಮೆ ಇರುವ ಕಾರಣ, ಬೆಸ್ಕಾಂನವರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಇದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಕಡಿಮೆಯಾಯಿತು ವಿಸ್ತೀರ್ಣ: ಮೂಲಯೋಜನೆಯ ಪ್ರಕಾರ 10 ಮೀಟರ್ ವಿಸ್ತೀರ್ಣದ ದ್ವಿಮುಖ ರಸ್ತೆ ನಿರ್ಮಾಣಗೊಳ್ಳಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆ ಯೋಜನೆಯನ್ನು ಬದಲಿಸಿ, 7 ಮೀಟರ್ ವಿಸ್ತೀರ್ಣದ ತಾತ್ಕಾಲಿಕ ದ್ವಿಮುಖ ರಸ್ತೆಯಾಗಿ ಬದಲಿಸಿದೆ. ಈ ಬಗ್ಗೆ ಯೋಜನಾ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಅನುಮೋದನೆ ಸಿಕ್ಕಿಲ್ಲ ಎನ್ನಲಾಗಿದೆ.
ಬೆಸ್ಕಾಂನವರು ರಸ್ತೆ ಆಳದಲ್ಲಿ ವಿದ್ಯುತ್ ಮಾರ್ಗ ಅಳವಡಿಸುವಾಗ ಇಲಾಖೆಗೆ ಮಾಹಿತಿ ನೀಡಿಲ್ಲ. ಆದರೆ ಈಗ ನಾವು ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿರುವಾಗ ವಿದ್ಯುತ್‌ಲೈನ್ ತೆರವುಗೊಳಿಸಲು ಆಗುವ ವೆಚ್ಚವನ್ನು ಭರಿಸುವಂತೆ ಆಗ್ರಹಿಸುತ್ತಿದ್ದಾರೆ. ನಮ್ಮಲ್ಲಿ ಅಷ್ಟು ಅನುದಾನ ಇಲ್ಲ. ಮೋರಿಗಳ ಕೆಲಸ ಇದ್ದುದರಿಂದ ಕೆಲಸ ವಿಳಂಬವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸಲಾಗುವುದು. ಕೃಷ್ಣಪ್ಪ, ಪಿಡಬ್ಲೂೃಡಿ ಇಂಜಿನಿಯರ್ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಇಕ್ಕಟ್ಟಾಗಿತ್ತು. ಒಂದು ಬದಿಯಿಂದ ವಾಹನಗಳು ಬಂದರೆ ಮತ್ತೊಂದು ಬದಿಯಲ್ಲಿ ಚಲಿಸುವ ವಾಹನ ಮುಂದೆ ಸಾಗಲು ಪರದಾಡುವ ಸ್ಥಿತಿ ಇತ್ತು. ಈ ರಸ್ತೆಯ ವಿಸ್ತರಣೆ ಕಾಮಗಾರಿ ಪ್ರಾರಂಭವಾದಾಗ ಓಡಾಡಲು ಅನುಕೂಲವಾಗುವುದು ಎಂದು ನೆಮ್ಮದಿಯಾಗಿತ್ತು. ಆದರೆ, ಕಾಮಗಾರಿ ಕುಂಟುತ್ತಿರುವುದರಿಂದ, ವಾಹನಚಾಲಕರ ನೆಮ್ಮದಿ ಭಂಗವಾಗಿದೆ. ಎಸ್.ಆರ್. ಉಮೇಶ್, ಕುಂದಾಣ