ಹಾಸನ: ದೇಶಾದ್ಯಂತ ಅರೆ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಯೋಧರ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ನಗರದ ಹೊರವಲಯದ ಕೆಂಚಟ್ಟಹಳ್ಳಿಯಲ್ಲಿ ನಿರ್ಮಿಸಿರುವ ರಾಜ್ಯದಲ್ಲೇ ಮೊದಲ ಅರೆಸೇನಾ ಪಡೆ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸಂತೋಷದಿಂದ ಈ ಭವನ ಉದ್ಘಾಟಿಸಿದ್ದೇನೆ. ದೇಶದಲ್ಲಿ ಅರೆಸೇನಾ ಯೋಧರು, ಸೇನೆಯ ಮೂರು ವಿಭಾಗಗಳ ಯೋಧರು ಮಾಡುವ ಕೆಲಸವನ್ನು ಮಾಡುತ್ತಾರೆ. ಅರೆಸೇನಾ ಪಡೆಯ ಸೈನಿಕರು ಜೀವ ಲೆಕ್ಕಿಸದೆ ಶ್ರಮವಹಿಸಿ ಮಾಡುವ ಕೆಲಸವನ್ನೂ ಸರ್ಕಾರ ಮರೆಯಬಾರದು. ನಾನು ಅರೆಸೇನಾ ಪಡೆಯ ಕುಟುಂಬದ ನೋವು ಅರಿತುಕೊಂಡಿದ್ದೇನೆ ಎಂದರು.
ಸೈನಿಕರ ಆರೋಗ್ಯ ಶಿಬಿರಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು. ಉಳಿದ ನಿಮ್ಮ ಬೇಡಿಕೆ ಈಡೇರಿಕೆಗೆ ಸ್ವಲ್ಪ ಸಮಯ ಕೊಡಿ, ದೇವೇಗೌಡರ ಸಹಕಾರದಿಂದ ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಪಂದಿಸುವಂತೆ ಮಾಡಲಾಗುವುದು. ಕಾರ್ಖಾನೆ, ಗಡಿಯಲ್ಲಿ ಅರೆಸೇನಾ ಪಡೆಯ ಕಾರ್ಯವನ್ನು ಗಮನಿಸಿದ್ದೇನೆ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅರೋಗ್ಯ ಸಮಸ್ಯೆ ನಡುವೆಯೂ ನಿಮ್ಮೊಂದಿಗೆ ಇದ್ದು, ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಲು ಬಂದಿದ್ದೇನೆ. ದೇಶದ ಒಳಗಿರುವ ರಾಜಕಾರಣಿಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂದು ನೀವೆಲ್ಲ ಗಮನಿಸುತ್ತಿದ್ದೀರಿ. ನಾನು ಎರಡು ಬಾರಿ ಸಿಎಂ ಆದರೂ ಹೆಚ್ಚು ಸಮಯ ಸಿಗಲಿಲ್ಲ. ಪೂರ್ಣಾವಧಿ ಸಿಕ್ಕಿದ್ದರೆ ಮಾದರಿ ಸರ್ಕಾರ ನಡೆಸುತ್ತಿದ್ದೆ. ಅದು ನನ್ನ ದುರಾದೃಷ್ಟ ಎಂದು ಭಾವಿಸುವುದಿಲ್ಲ ಎಂದರು.
ಸಾಲ ಮಾಡಿ ಮನೆ ಕಟ್ಟಿ, ಮಕ್ಕಳನ್ನು ಓದಿಸಿದರೆ ಆ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ. ರಾಜ್ಯ ಸರ್ಕಾರದ ಒಟ್ಟು ಸಾಲ 7 ಲಕ್ಷ ಕೋಟಿ ರೂ. ದಾಟಿದೆ. ಅವರೇ ನಾಚಿಕೊಳ್ಳುತ್ತಿಲ್ಲ. ನೀವು ಯಾಕೆ ಆತ್ಮಹತ್ಯೆ ಮಾಡುಕೊಳ್ಳುತ್ತೀರಾ ಎಂದು ಸಾಲಗಾರರಿಗೆ ಧೈರ್ಯ ಹೇಳಿದರು.
ತಪ್ಪುಗಳು ಆಗುತ್ತವೆ, ಆ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿ. ನಮಗೆ ಸಿಕ್ಕಿರುವ ಈ ಅವಕಾಶವನ್ನು ಜನರಿಗೆ ಧಾರೆ ಎರೆಯುತ್ತೇನೆ. ಅಧಿಕಾರ ದುರುಪಯೋಗಪಡಿಸಿ ಕೊಳ್ಳುವುದಿಲ್ಲ. ನನ್ನನ್ನು ಮನೆಯ ಮಗ, ಕುಟುಂಬದ ಸದಸ್ಯ ಎಂದು ಸ್ವೀಕಾರ ಮಾಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ದೇವೇಗೌಡರು ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನದಿ ಜೋಡಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ನೇರಳೆ, ಹುಣಸೆ, ಹಲಸು ಬೆಳೆಯುವ ರೈತರಿಗಾಗಿ ನಿಗಮ ಮಾಡುವಂತೆ ರಾಜ್ಯಸಭೆಯಲ್ಲಿ ದೇವೇಗೌಡರು ಮನವಿ ಮಾಡಿದ್ದಾರೆ. ನಮ್ಮ ತಂದೆ ಬದುಕಿರುವ ಒಳಗೆ ಈ ದೇಶ, ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ನುಡಿದರು.
ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳಿವೆ. ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಬೇಕಾಗಿದೆ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯಲ್ಲಿ ಐಟಿ ಪಾರ್ಕ್ ನಿರ್ಮಾಣ ಮಾಡಿ, ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಡಾ. ಸೂರಜ್ ರೇವಣ್ಣ, ಮಾಜಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಅರೆ ಸೇನಾಪಡೆ ಜಿಲ್ಲಾಧ್ಯಕ್ಷ ಪಿ.ವಿ.ನಾಗೇಶ್ ಹಾಗೂ ಪದಾಧಿಕಾರಿಗಳು ಇದ್ದರು.