ಗುಂಡ್ಲುಪೇಟೆ ತಾಲೂಕಿನ ಅರಿಶಿಣ ಬೆಳೆಗಾರರು ಸರ್ಕಾರದಿಂದ ಬೆಂಬಲಬೆಲೆ ಪಡೆಯುವ ಸಲುವಾಗಿ ಗ್ರಾಮಗಳ ಬೆಳೆಗಾರರಿಗೆ ಕರಪತ್ರ ಹಂಚಿ ಅರಿವು ಮೂಡಿಸುತ್ತಿದ್ದಾರೆ. 
ಜಿಲ್ಲೆ

ಅರಿಶಿಣ ಬೆಳೆಗಾರರ ಕರಪತ್ರ ಚಳವಳಿ

ಗುಂಡ್ಲುಪೇಟೆ: ಬೆಲೆ ಕುಸಿತದಿಂದ ಕಂಗೆಟ್ಟಿರುವ ತಾಲೂಕಿನ ಅರಿಶಿಣ ಬೆಳೆಗಾರರು ಸರ್ಕಾರದಿಂದ ಬೆಂಬಲಬೆಲೆ ಪಡೆಯುವ ಸಲುವಾಗಿ ಸಂಘಟನೆ ಆರಂಭಿಸಿದ್ದು, ಪ್ರತಿ ಗ್ರಾಮಗಳ ಬೆಳೆಗಾರರಿಗೆ ಕರಪತ್ರ ಹಂಚಿಕೆ ಮಾಡಿ ಅರಿವು ಮೂಡಿಸುತ್ತಿದ್ದಾರೆ.
ಪ್ರಗತಿಪರ ರೈತರಾದ ಎಸ್.ಎಂ.ನಾಗಾರ್ಜುನಕುಮಾರ್, ದೊಡ್ಡತುಪ್ಪೂರು ಶಶಿಕುಮಾರ್, ತೆರಕಣಾಂಬಿ ಚಂದ್ರು ಅವರು ಗ್ರಾಮಗಳಿಗೆ ತೆರಳಿ ಕರಪತ್ರ ವಿತರಣೆ ಮಾಡುತ್ತಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಫೆ. 16 ರಂದು ಜಿಲ್ಲೆಯ ಎಲ್ಲ ತಾಲೂಕುಗಳಿಂದ 10 ಸಾವಿರ ರೈತರು ಬೈಕ್ ರ‌್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕಾಗಿದೆ. ಅಲ್ಲದೆ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಬೆಂಬಲ ಬೆಲೆ ಕೊಡಿಸುವಂತೆ ಮನವಿ ಮಾಡಲಾಗಿದೆ. ಚುನಾವಣೆ ಸಂದರ್ಭ ಆಗಿರುವುದರಿಂದ ಸರ್ಕಾರ ಬಜೆಟ್‌ನಲ್ಲಿ ಬೆಂಬಲ ಬೆಲೆ ಘೋಷಿಸುವ ಭರವಸೆ ಇದೆ. ಇದರಿಂದ ಬೆಳೆಗಾರರು ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡುತ್ತಿದ್ದಾರೆ.
ಸದ್ಯ 50 ಸಾವಿರ ಕರಪತ್ರ ಮುದ್ರಿಸಿ ಎಲ್ಲ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ವಿತರಣೆ ಮಾಡಲಾಗುತ್ತಿದೆ. ರೈತರು ಸ್ಪಂದಿಸುತ್ತಿದ್ದಾರೆ ಎಂದು ನಾಗಾರ್ಜುನಕುಮಾರ್ ತಿಳಿಸಿದರು.