ಕಮಲನಗರ: ಲಿಂಗ ಆಯತ, ಲಿಂಗ ಸ್ವಾಯತ, ಲಿಂಗ ಸನ್ನಿಯಿತ, ಮನವೇ ಲಿಂಗವಾದ ಬಳಿಕ ಯಾರನ್ನ ನೆನೆಯಲಿ ಎನ್ನುವ ಸೈದ್ಧಾಂತಿಕ ವಿಚಾರ ಹೊಂದಿದ ಅಲ್ಲಮಪ್ರಭು ದೇವರು ಅರಿವಿನ ಬೆಳಕಾಗಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಣ್ಣಿಸಿದರು.
ತಾಲೂಕಿನ ಖೇಡ್-ಸಂಗಮ ಗ್ರಾಮದ ಹತ್ತಿರವಿರುವ ಡಾ.ಚನ್ನಬಸವ ಪಟ್ಟದ್ದೇವರ ಗುರುಕುಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಲ್ಲಮಪ್ರಭುದೇವರ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅಹಂಕಾರವನ್ನು ನಾಶಪಡಿಸುವ ಅಸ್ತç ವಿದ್ಯೆಯಾಗಿದೆ. ಅಹಂಕಾರವನ್ನು ತೊಡೆದು ಸತ್ಸಂಗ ಮತ್ತು ಅನುಭಾವದ ಸಾರ ಪಡೆದು ಬದುಕು ಹಸನಾಗಿಸಿಕೊಳ್ಳಬೇಕು. ದುರ್ಗುಣ ಮತ್ತು ದುಶ್ಚಟಗಳನ್ನು ಬಿಟ್ಟು ಸದಾಚಾರಿ ವ್ಯಕ್ತಿಯಾಗಿ ಬದುಕುವ ಮೂಲಕ ಅಲ್ಲಮರ ವಚನಗಳ ಅಧ್ಯಯನ ನಡೆಸಬೇಕು ಎಂದರು.
ನೇತೃತ್ವ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಮರ್ತ್ಯುಲೋಕದ ಮಹಾಮನೆ ಹಾಳಾಗಬಾರದು ಎನ್ನುವ ಉದ್ದೇಶದಿಂದ ವಿಶ್ವಗುರು ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದರು. ಒಳ ಮತ್ತು ಹೊರ ಶುದ್ಧಿಗೆ ಮುಂದಾದ ಅಲ್ಲಮಪ್ರಭು ದೇವರು ವಿಶ್ವದ ಶ್ರೇಷ್ಠ ವೈಚಾರಿಕ ಪುರುಷರಾಗಿದ್ದಾರೆ ಎಂದರು.
ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಲ್ಲಮಪ್ರಭುದೇವರು ನಿಂತ ನೀರಾಗದೆ ಜನಮಾನಸದ ಓರೆಕೊರೆ ತಿದ್ದುತ್ತಾ, ಕಲ್ಯಾಣದ ಕಡೆ ಭಕ್ತರ ದಂಡು ಬರುವಂತೆ ಮಾಡಿ ಬಸವ ಪಥದ ಮಾರ್ಗದಲ್ಲಿ ನಡೆಯುವಂತೆ ಮಾಡಿದ ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧ್ಯಕ್ಷರಾಗಿದ್ದರೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ಪೂಜ್ಯ ಡಾ.ಮಹಾದೇವಮ್ಮತಾಯಿ ವಹಿಸಿದ್ದರು. ಖೇಡ-ಸಂಗಮ ಅಕ್ಕನ ಬಳಗದ ಶರಣೆಯರಿಂದ ಅಲ್ಲಮಪ್ರಭುದೇವರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಬಸವ ಗುರುಪೂಜೆ ಪೂಜ್ಯ ಮಾತೆಯರಿಂದ ನಡೆಯಿತು.
ಅನುಭಾವ ಶಿವರುದ್ರಯ್ಯ ಸ್ವಾಮಿ ಮಾಡಿದರು. ಷಟಸ್ಥಲ ಧ್ವಜಾರೋಹಣ ವಿಶ್ವನಾಥಪ್ಪ ಬಿರಾದಾರ ನೆರವೆರಿಸಿದರು. ಪೂಜ್ಯ ಶ್ರೀ ನೀಲಾಂಬಿಕಾ ತಾಯಿ ಕುರುಬಖೇಳಗಿ, ಪೂಜ್ಯ ಶ್ರೀ ದೇವಮ್ಮತಾಯಿ ಡೋಣಗಾಪುರ, ಔರಾದ್ ಕಸಾಪ ತಾಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ವೈಜಿನಾಥ ರಾಜಗೀರೆ, ಸಿದ್ದಯ್ಯ ಕಾವಡಿಮಠ, ಮಲ್ಲಿಕಾರ್ಜುನ ದಾನಾ, ಓಂಪ್ರಕಾಶ ಬಿರಾದಾರ, ನಾಗಯ್ಯ ಸ್ವಾಮಿ, ಸಂಗಮೇಶ ಸಾವಳೆ, ಅನೀಲ ಹೊಳಸಮುದ್ರೆ, ವೀರೇಂದ್ರಕುಮಾರ ಬಿರಾದಾರ, ಜಗನ್ನಾಥ ಬಿರಾದಾರ, ರಾಜಕುಮಾರ ಬಿರಾದಾರ, ಸುರೇಶ ಸೊಲ್ಲಾಪುರೆ ಇತರರಿದ್ದರು.
ನೀಲಕಂಠ ಬಿರಾದಾರ ವಂದಿಸಿದರು. ಡಾ.ಸಂಜೀವಕುಮಾರ ಜುಮ್ಮಾ ಸ್ವಾಗತಿಸಿದರು. ಸಂಜೀವಕುಮಾರ ಮೆಂಗಾ ನಿರೂಪಣೆ ಮಾಡಿದರು.
ಶೂನ್ಯ ಸಿಂಹಾಸನಾಧೀಶನಾಗಿ, ಬಸವಾದಿ ಪ್ರಥಮರ ಮಾನಸಿಕ ಗುರುವಾಗಿ, ಅಪ್ಪಟ ಜಂಗಮನಾಗಿ, ಸಮಕಾಲೀನ ಶರಣರನ್ನೆಲ್ಲ ಸಮಾನ ಪ್ರೀತಿ ಗೌರವಗಳಿಂದ ಕಂಡವನಾಗಿ, ಮೃದು ಹೃದಯದ ಕಠಿಣ ನಿಲುವಿನವನಾಗಿ, ವ್ಯೋಮ ಮೂರ್ತಿಯಾಗಿ, ನಭೋಮಂಡಲವನ್ನು ಬೆಳಗಿದವ ಶ್ರೇಷ್ಠ ಶರಣ ಅಲ್ಲಮಪ್ರಭುದೇವರಾಗಿದ್ದರು.
|ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್ ಬಸವಕಲ್ಯಾಣ
ಬೌದ್ಧಿಕ ಕೃಷಿಯೊಂದಿಗೆ ಶರೀರದೊಳಗೂ ಕೃಷಿ ನಡೆಯಬೇಕು. ಗುರು ಉಪದೇಶವೆಂಬ ಬೀಜ ಹಾಕಿ ಸಂಸ್ಕಾರವೆಂಬ ನೀರೆರೆದು, ದುರ್ಗುಣಗಳೆಂಬ ಕಳೆ ತೆಗೆದು, ಮುಕ್ತಿ ಎಂಬ ಧಾನ್ಯ ಬೆಳೆಯಬೇಕು. ಸತ್ಯ-ಶುದ್ಧ ಕಾಯಕದಲ್ಲಿ ಮನುಷ್ಯ ನಿರತನಾದರೆ ಸಮಾಜದ ಏಳಿಗೆ ಸಾಧ್ಯ.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ
=====