ಬಾಲಕಾರ್ಮಿಕ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಶುಕ್ರವಾರ ಸಕಲೇಶಪುರದ ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸಿದರು. ರವಿ, ಕಾಂತರಾಜ್, ಸುರೇಶ್, ಎಂ.ಪಿ.ಪಟೇಗಾರ್, ನಾಗುಬಾಯಿ ಇತರರಿದ್ದರು. 
ಜಿಲ್ಲೆ

ಅರಿವಿನ ಪರಿಣಾಮ ಬಾಲಕಾರ್ಮಿಕರ ಸಂಖ್ಯೆ ಕುಂಠಿತ

ಎಂ.ರವಿ

ಸಕಲೇಶಪುರ: ಅಪ್ರಾಪ್ತರಿಂದ ದುಡಿಸಿಕೊಳ್ಳುವುದು ಕಟುಕ ಮನಸ್ಥಿತಿಯ ಸೂಚಕವಾಗಿದೆ ಎಂದು ಹಿರಿಯ ಕಾರ್ಮಿಕ ನಿರೀಕ್ಷಕ ರವಿ ಹೇಳಿದರು.

ಶುಕ್ರವಾರ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಅಂಗವಾಗಿ ಕಾರ್ಮಿಕ, ಕಂದಾಯ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಹೋಟೆಲ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಕ್ಕಳಿಂದ ದುಡಿಸಿಕೊಳ್ಳುವುದರಿಂದ ಅವರ ಭವಿಷ್ಯವನ್ನು ಕತ್ತಲೆಯಡೆಗೆ ತಳ್ಳಿದಂತೆ ಆಗಲಿದೆ. ಕಾರ್ಮಿಕ ಇಲಾಖೆಯಿಂದ ನಿರಂತರ ಅರಿವಿನ ಪರಿಣಾಮ ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವ ವ್ಯಕ್ತಿಗೆ ಭಾರಿ ಮೊತ್ತದ ದಂಡ ಹಾಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಇಂತಹ ಪ್ರಕರಣಗಳು ಕಂಡುಬಂದರೆ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡವಂತೆ ಮನವಿ ಮಾಡಿದರು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಕಾಂತರಾಜ್, ಲಲಿತಾ, ಕಂದಾಯ ನಿರೀಕ್ಷಕ ಸುರೇಶ್, ಹಿಂದುಳಿದ ವರ್ಗಗಳ ಇಲಾಖೆಯ ಎಂ.ಪಿ ಪಟೇಗಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಾಗುಬಾಯಿ, ಪುರಸಭೆ ಆರೋಗ್ಯ ನಿರೀಕ್ಷಕ ಧನೇಂದ್ರಪ್ಪ ಮುಂತಾದವರಿದ್ದರು.