ಮೈಸೂರು: ಅರಿವಳಿಕೆ ಶಾಸ್ತ್ರದಲ್ಲೂ ಆಧುನಿಕ ತಂತ್ರಜ್ಞಾನ ಆಧಾರಿತ ಅಧ್ಯಯನ ಮತ್ತು ಸಂಶೋಧನೆ ಅಗತ್ಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಭಾರತೀಯ ಅರಿವಳಿಕೆ ಶಾಸ್ತ್ರಜ್ಞರ ಸಂಘ (ಐಎಸ್‌ಎ)ದ ರಾಜ್ಯ, ನಗರ ಸಮಿತಿ ವತಿಯಿಂದ ಮೈಸೂರು ವೈದ್ಯಕೀಯ ಕಾಲೇಜಿನ ಆವರಣದ ನೂತನ ಗ್ರಂಥಾಲಯ ಸಂಕೀರ್ಣ ಸಭಾಂಗಣದಲ್ಲಿ 38ನೇ ದಕ್ಷಿಣ ವಲಯ ಮಟ್ಟದ, 37ನೇ ರಾಜ್ಯ ಮಟ್ಟದ ಅರಿವಳಿಕೆ ಶಾಸ್ತ್ರಜ್ಞರ ವಾರ್ಷಿಕ ಮಹಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ರಂಗ ತ್ವರಿತಗತಿಯಲ್ಲಿ ಬೆಳವಣಿಗೆ ಆಗುತ್ತಿದೆ. ಅದರ ಭಾಗವಾಗಿರುವ ಅರಿವಳಿಕೆ ಶಾಸ್ತ್ರ ಕೂಡ ಸುಧಾರಣೆ ಆಗಬೇಕು. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಂಡು ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಅರಿವಳಿಕೆ ಶಾಸ್ತ್ರಕ್ಕೆ ಬಹಳಷ್ಟು ಮಹತ್ವವಿದೆ. ಇದನ್ನು ಹೊರತುಪಡಿಸಿ ವೈದ್ಯಕೀಯ ಶಸ್ತ್ರಚಿಕಿತ್ಸೆ ಕೈಗೊಳ್ಳುವುದು ಕಷ್ಟಕರ. ರೋಗಿಯನ್ನು ಉಳಿಸಿಕೊಳ್ಳಲು ಅರಿವಳಿಕೆ ಔಷಧ ಅನಿವಾರ್ಯ ಎಂದರು.
ವೈದ್ಯ ಜಗತ್ತು ವಿಸ್ತಾರವಾದಷ್ಟೂ ಅರಿವಳಿಕೆ ಶಾಸ್ತ್ರವೂ ಅಪಾರವಾಗಿ ಬೆಳವಣಿಗೆ ಹೊಂದಿದೆ. ವೈದ್ಯ ಲೋಕದಲ್ಲಿ ನಡೆಯುವ ಹೃದಯ, ಮೂತ್ರಪಿಂಡ, ಕರುಳು, ಎಲುವು-ಕೀಲು ಜೋಡಣೆ ಮೊದಲಾದ ಶಸ್ತ್ರಕ್ರಿಯೆಯಲ್ಲಿ ಅರಿವಳಿಕೆ ಪಾತ್ರ ಮಹತ್ವದ್ದಾಗಿದೆ. ತಜ್ಞ ವೈದ್ಯರು, ಶಸ್ತ್ರಚಿಕಿತ್ಸಾ ವೈದ್ಯರಿಗೆ ಸಮನಾಗಿ ಅರಿವಳಿಕೆ ಶಾಸ್ತ್ರ ವೈದ್ಯರು ಸೇವೆ ನೀಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಡಾ. ಮಹದೇವಪ್ಪ ಹೇಳಿದರು.
ಕರೊನಾ ಕಾಲದಲ್ಲಿ ವೈದ್ಯಕೀಯ ಕ್ಷೇತ್ರ ಸಾಕಷ್ಟು ಕೆಲಸ ಮಾಡಿದೆ. ವೈದ್ಯರು ಕೋವಿಡ್ ಪೀಡಿತರ ಜೀವ ಉಳಿಸಲು ಶ್ರಮಿಸಿದ್ದಾರೆ. ಅದಕ್ಕೆ ಇಡೀ ದೇಶವೇ ಆಭಾರಿ ಆಗಿರುತ್ತದೆ ಎಂದರು.
ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಎಂ.ವಿ.ಭೀಮೇಶ್ವರ್, ಐಎಸ್‌ಎ ದಕ್ಷಿಣ ವಲಯ ಅಧ್ಯಕ್ಷೆ ಡಾ.ಆರ್.ಉಷಾದೇವಿ, ಪದಾಧಿಕಾರಿಗಳಾದ ಡಾ. ಚಿಂತಲಾ ಕೃಷ್ಣ, ಡಾ.ಕೆ.ಎಂ.ವೆಂಕಟಗಿರಿ, ಡಾ.ಗುರುಲಿಂಗಪ್ಪ ಪಾಟೀಲ್, ಡಾ.ಎಂ.ಸಿ.ಶಿವಕುಮಾರ್, ಡಾ.ಡಿ.ಸಂಧ್ಯಾ, ಡಾ.ವಿ.ವೈ.ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು
ಅರಿವಳಿಕೆ ತಜ್ಞರು ಭಾಗಿ
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ರೋಗಿಗಳ ಸುರಕ್ಷತೆ, ಇತ್ತೀಚಿನ ಪ್ರಗತಿಗಳ ಕುರಿತು ಚರ್ಚೆ ನಡೆಯಲಿದೆ. ಕಸಿ ಅರಿವಳಿಕೆ, ಅಲ್ಟ್ರಾಸೌಂಡ್, ಟ್ರಾಮಾ, ತೀವ್ರ ನಿಗಾ ಕ್ಷೇತ್ರ, ಪುನಶ್ಚೇತನ ಕ್ರಿಯೆ, ಪ್ರಸೂತಿ ಅರಿವಳಿಕೆ, ನೋವು ರಹಿತ ಹೆರಿಗೆ, ಮಕ್ಕಳ ಅರಿವಳಿಕೆ ಕುರಿತು ವಿಷಯ ಮಂಡಿಸಲಾಗುತ್ತಿದೆ.
ಅಂತಾರಾಷ್ಟ್ರೀಯ, ರಾಷ್ಟ್ರಮಟ್ಟದ ಅಂದಾಜು 150 ಅರಿವಳಿಕೆ ತಜ್ಞರು, ಬೋಧಕರು ಭಾಗವಹಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಕೇರಳ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳಿಂದ ಸುಮಾರು 1500 ತಜ್ಞರು, ಅರಿವಳಿಕೆ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.