ಜಿಲ್ಲೆ

ಅರಹುಣಸಿಯಲ್ಲಿ ಸಾಂಕ್ರಾಮಿಕ ರೋಗ ಭೀತಿ!

ರೋಣ: ತಾಲೂಕಿನ ಅರಹುಣಸಿ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರು ಕಳೆದ ಮೂರ್ನಾಲ್ಕು ದಿನಗಳಿಂದ ಕೆಮ್ಮು, ನೆಗಡಿ, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಕಳೆದ ಮೂರು ದಿನಗಳಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೀಡುಬಿಟ್ಟು ಚಿಕಿತ್ಸೆ ನೀಡುತ್ತಿದ್ದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಜೀವನ ಮಾಡುವುದು ಹೇಗೆ ಎಂಬ ಚಿಂತೆ ಗ್ರಾಮಸ್ಥರಿಗೆ ಶುರುವಾಗಿದ್ದು, ಕೆಲ ದಿನಗಳ ಮಟ್ಟಿಗೆ ಊರು ತೊರೆಯಲು ಮುಂದಾಗಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಗುರುವಾರ ಕೆಮ್ಮು, ನೆಗಡಿ ಮತ್ತು ಜ್ವರದಿಂದ ಬಳಲುತ್ತಿದ್ದ 30 ಮಂದಿ ಮತ್ತು ಎಚ್1ಎನ್1 ಶಂಕೆಯ ಮೇರೆಗೆ 10ಕ್ಕೂ ಹೆಚ್ಚು ಜನರ ರಕ್ತ ಮತ್ತು ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 100ಕ್ಕೂ ಹೆಚ್ಚು ಜನರಿಗೆ ಸೂಕ್ತ ಔಷಧ ನೀಡಲಾಗಿದೆ.

ಭೀತಿಗೊಂಡಿರುವ ಗ್ರಾಮದ ಜನರು ನಿತ್ಯ ರೋಣ ತಾಲೂಕು ಆಸ್ಪತ್ರೆ ಹಾಗೂ ಗ್ರಾಮದ ಸುತ್ತಲಿನ ಮಲ್ಲಾಪೂರ, ಸವಡಿ ಮತ್ತಿತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ 350ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೋವಿಡ್-19, ಎಚ್1 ಎನ್1, ಮಲೇರಿಯಾ, ಚಿಕೂನ್​ಗುನ್ಯಾ ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರೋಣ ತಾಲೂಕಿನ ಅರಹುಣಸಿ ಗ್ರಾಮ ದಲ್ಲಿ ಕಳೆದ ಕೆಲ ದಿನಗಳಿಂದ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಿದ್ದು, ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ಕುಟುಂಬ ಸದಸ್ಯರಿಂದ ಆರೋಗ್ಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 25 ಜನರ ಗಂಟಲ ದ್ರವ ಮಾದರಿ ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.| ಡಾ. ಸತೀಶ ಬಸರೀಗಿಡದಡಿಎಚ್​ಒ, ಗದಗ