ಚಾಮರಾಜನಗರ: ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ ಗೋವಿಂದರಾಜು ಸ್ಮರಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇವರಾಜ ಅರಸು ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಇತ್ತು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ದೇಶ, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಅರಸು ಸೇರಿದಂತೆ ಮಹನೀಯರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ವಸತಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ.ಆರ್.ಸುಬ್ರಾನಾಯಕ್, ವಿದ್ಯಾರ್ಥಿಗಳು ಇದ್ದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಅಂಗವಾಗಿ ಆ.22ರಂದು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ವಸತಿ ಶಾಲೆ ಮತ್ತು ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಲಿದೆ. 10 ಗಂಟೆಗೆ ಪರಿಸರವಾದಿಗಳಿಂದ ಅರಣ್ಯ ಬೆಳಕು ಹೆಸರಿನಡಿ ಅರಣ್ಯ ಮಹತ್ವದ ಕುರಿತು ಉಪನ್ಯಾಸ ನಡೆಯಲಿದೆ. 11 ಗಂಟೆಗೆ ನುರಿತ ಐಎಎಸ್ ಮತ್ತು ಕೆಎಎಸ್ ತರಬೇತುದಾರರಿಂದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ಕುರಿತು ಕಾರ್ಯಾಗಾರ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.