ಜಿಲ್ಲೆ

ಅರಸು ಹಿಂದುಳಿದ ವರ್ಗಗಳ ದನಿ ; ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಬಣ್ಣನೆ

ತುಮಕೂರು: ಕರ್ನಾಟಕದ ಅಭಿವೃದ್ಧಿಗೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರ ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅಭಿಪ್ರಾಯಪಟ್ಟರು.

ತುಮಕೂರು ವಿವಿ ಹಿಂದುಳಿದ ವರ್ಗಗಳ ಕೋಶ ಹಾಗೂ ಡಿ.ದೇವರಾಜ ಅರಸು ಅಧ್ಯಯನ ಪೀಠ ಗುರುವಾರ ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿ ಮತ್ತು ಸದ್ಭಾವನಾ ದಿನಾಚರಣೆಯಲ್ಲಿ ಮಾತನಾಡಿದರು. ಅರಸು ಹಿಂದುಳಿದ ವರ್ಗಗಳ ದನಿಯಾಗಿದ್ದರು, ಸಾಮಾಜಿಕ ನ್ಯಾಯ, ಭೂಸುಧಾರಣೆಗಳಂತಹ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡ ಅವರನ್ನು ಕನ್ನಡನಾಡು ಎಂದೆಂದಿಗೂ ಸ್ಮರಿಸಬೇಕು ಎಂದರು.

ಬಸವಣ್ಣನವರು ತಮ್ಮ ಅನುಭವ ಮಂಟಪದಲ್ಲಿ ಎಲ್ಲ ಜಾತಿಮತಗಳ ಶರಣರಿಗೆ ಅವಕಾಶ ಮಾಡಿಕೊಟ್ಟಂತೆ ದೇವರಾಜ ಅರಸರು ಎಲ್ಲ ವರ್ಗಗಳ ಮಂದಿಗೆ ಅಧಿಕಾರ ಕೇಂದ್ರಕ್ಕೆ ಪ್ರವೇಶ ನೀಡಿ ಸಮಾನತೆಯ ಹರಿಕಾರರಾದರು. ಸಂವಿಧಾನದ ಸವಲತ್ತುಗಳು ಎಲ್ಲರಿಗೂ ದೊರಕುವಂತೆ ಆಗಬೇಕೆಂಬುದು ಅರಸು ಅವರ ಏಕೈಕ ಕನಸಾಗಿತ್ತು. ಅವರ ಯೋಜನೆಗಳ ಸಮರ್ಪಕ ಅನುಷ್ಠಾನ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಮಾತನಾಡಿ, ದೃಢಸಂಕಲ್ಪದಿಂದ ಒಬ್ಬ ವ್ಯಕ್ತಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ದೇವರಾಜ ಅರಸರು ಸಾಕ್ಷಿ. ಅಂದಿನ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಅಖಂಡ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ ಅವರನ್ನು ಮರೆಯಬಾರದು ಎಂದರು.

ಮಲಹೊರುವ ಪದ್ಧತಿ, ಜೀತಪದ್ಧತಿಗಳಂತಹ ಅನಿಷ್ಟಗಳನ್ನು ಹೋಗಲಾಡಿಸಿ ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದು ಭೂಸುಧಾರಣೆಗೆ ಕಾರಣರಾದ ದೇವರಾಜ ಅರಸು ಸಮಾನತೆಗಾಗಿ ಅವಿರತವಾಗಿ ಶ್ರಮಿಸಿದರು ಎಂದರು. ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿ.ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಸಂಯೋಜಕ ವೆಂಕಟರೆಡ್ಡಿ ರಾಮರೆಡ್ಡಿ ಇದ್ದರು.