ಜಿಲ್ಲೆ

ಅರಸು ಪ್ರಶಸ್ತಿ ಪ್ರದಾನ ೨೩ರಂದು

ಕಲಬುರಗಿ: ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಸೆ.೨೩ರಂದು ಡಿ.ದೇವರಾಜ ಅರಸು ಜಯಂತ್ಯುತ್ಸವ ಹಾಗೂ ೨೨೪ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಸಾಧಕರಿಗೆ ಅರಸು ಪ್ರಶಸ್ತಿ ಪ್ರದಾನ ಮತ್ತು ಕಲ್ಯಾಣ ಕರ್ನಾಟಕದ ಸಚಿವ-ಶಾಸಕರ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ ಸಾಂಸ್ಕೃತಿಕ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್ ಹೇಳಿದರು.

ಅರಸು ಹಿಂದುಳಿದ ವರ್ಗಗಳ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆಕೆಆರ್‌ಡಿಬಿ ಸಹಯೋಗದಡಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಉದ್ಘಾಟಕರಾಗಿರುವರು. ಸಚಿವರಾದ ಶಿವರಾಜ ತಂಗಡಗಿ, ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಎನ್.ಎಸ್. ಬೋಸರಾಜು, ಜಮೀರ್ ಅಹ್ಮದ್ ಖಾನ್, ಈಶ್ವರ ಖಂಡ್ರೆ, ಬಿ.ನಾಗೇಂದ್ರ, ಶರಣಬಸಪ್ಪ ದರ್ಶನಾಪುರ, ರಹೀಮ್ ಖಾನ್, ಪ್ರಮುಖರಾದ ಅರುಣಕುಮಾರ್, ಭೀಮಾ ನಾಯ್ಕ್ ಮುಖ್ಯ ಅತಿಥಿಗಳಾಗಿರುವರು ಎಂದರು.

ಕಾಂತರಾಜ್ ಆಯೋಗದ ವರದಿ ಜಾರಿಗೊಳಿಸಬೇಕು. ಹಿಂದುಳಿದ ವರ್ಗಗಳ ೧೯೭ ಜಾತಿಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅತಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಹಾಂತೇಶ ಕೌಲಗಿ, ಅಪ್ಪಣ್ಣ, ಅಂಬರೀಶ್, ಶರಣಬಸಪ್ಪ ಸೂರ್ಯವಂಶಿ, ಮಲ್ಲಿಕಾರ್ಜುನ, ಸೂರ್ಯಕಾಂತ, ಶರಣಪ್ಪ ಇತರರಿದ್ದರು.