ಜಿಲ್ಲೆ

ಅರಸು ನಂತರ ಕಾಂಗ್ರೆಸ್‌ಗೆ ದೊಡ್ಡ ಗೆಲುವು : ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿಕೆ



ಕೊಡಗು : ಸಾಮಾಜಿಕ ಪರಿವರ್ತಕ ಹಾಗೂ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಕಾಲದ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ 135 ಸ್ಥಾನಗಳಲ್ಲಿ ಗೆಲುವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಅರಸು ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಸರ್ಕಾರ ಸಾಗದಿದ್ದಲ್ಲಿ ಪರಿಣಾಮ ಕಷ್ಟವಾಗಬಹುದು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.


ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಹಾಗೂ ಸಹಮತ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


1972ರಲ್ಲಿ 216 ವಿಧಾನಸಭಾ ಕ್ಷೇತ್ರಗಳಲ್ಲಿ 165 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇವರಾಜ ಅರಸು ಅವರು ಇತಿಹಾಸ ಸೃಷ್ಟಿಸಿದರು. ಇದೀಗ ಕರ್ನಾಟಕದಲ್ಲಿ ಎರಡನೇ ಇತಿಹಾಸ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯದೆಲ್ಲೆಡೆ 26 ದಿನಗಳ ಕಾಲ ಪ್ರವಾಸ ಕೈಗೊಂಡು 36 ಸಭೆಗಳನ್ನು ನಡೆಸಿದರು. ಆದರೆ ಮೌನವಾಗಿಯೇ ಇದ್ದ ಮತದಾರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್‌ಗೆ 135 ಸ್ಥಾನಗಳನ್ನು ತಂದು ಕೊಟ್ಟಿದ್ದಾರೆ ಎಂದರು.


ಸಹಮತ ವೇದಿಕೆಯ ಅಧ್ಯಕ್ಷ ಹಾಗೂ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ನೀಡಿದರು, ಸಿದ್ಧಾಂತ ಮತ್ತು ಮೌಲ್ಯ ಇದ್ದರೆ ಮಾತ್ರ ಜನಸಾಮಾನ್ಯರಿಗೆ ಸಹಾಯ ಮಾಡಲು ಸಾಧ್ಯ ಎಂದರು.


ಸಹಮತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು, ಪ್ರಮುಖ ಲಿಯಾಕತ್ ಆಲಿ ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ : ಮಹಿಳೋದಯ ಒಕ್ಕೂಟದ ಸಂಯೋಜಕಿ ಜಾಯ್ಸ ಮೆನೇಜಸ್, ತನಲ್ ವೃದ್ಧಾಶ್ರಮದ ಮೇಲ್ವಿಚಾರಕಿ ಬಿ.ಕೆ.ಶಶಿಕಲಾ, ಕೂರ್ಗ್ ಬ್ಲಡ್ ಫೌಂಡೇಷನ್‌ನ ಎಂ.ಸಮೀರ್, ಸಮಾಜ ಸೇವಕ ಬಾಬುಚಂದ್ರ ಉಳ್ಳಾಗಡ್ಡಿ ಅವರನ್ನು ಸನ್ಮಾನಿಸಲಾಯಿತು.