ಚಿತ್ರದುರ್ಗ: ಬಡತನ ನಿರ್ಮೂಲನೆ, ಭೂ ಸುಧಾರಣೆ, ಸಾಮಾಜಿಕ ನ್ಯಾಯಕ್ಕಾಗಿ ಹಗಲಿರಳು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಧೀಮಂತ ರಾಜಕಾರಣಿ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಬಣ್ಣಿಸಿದರು.
ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರದ ಎಸ್‌ಜೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ವಂಚಿತ ಸಮುದಾಯಗಳಿಗೆ ಅರಸು ಅವಕಾಶಗಳ ಬಾಗಿಲು ತೆರೆದರು. ಶ್ರೀಮಂತ ಕುಟುಂಬದ ಅರಸು ಬಡತನ ನಿರ್ಮೂಲನೆಗೆ ಪ್ರಯತ್ನಿಸಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಅವರ ಭಾಷಣಗಳ ಸಂಗ್ರಹವನ್ನು 13 ಸಂಪುಟಗಳಲ್ಲಿ ಹೊರತರಲಾಗಿದೆ. ಯುವ ಜನರು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ನಾನು ಕೂಡ ಬಿಸಿಎಂ ಹಾಸ್ಟೆಲ್‌ನಲ್ಲಿದ್ದು ಓದಿದ್ದೇನೆ. ಅರಸು ಅವರು ಮಾಡಿದ ಸಾಮಾಜಿಕ ಸುಧಾರಣೆ ಫಲವಾಗಿ ನನ್ನಂಥ ಲಕ್ಷಾಂತರ ಜನರು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ಏರಲು ಸಾಧ್ಯವಾಗಿದೆ. 1969ರಿಂದ 1979 ವರೆಗಿನ ಕಾಲವನ್ನು ಅರಸು ಯುಗ ಎನ್ನುತ್ತಾರೆ ಎಂದರು.
ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ, ಭೂ ಸುಧಾರಣೆ, ಕನಿಷ್ಠ ಕೂಲಿ ನಿಗದಿ, ಋಣ ಪರಿಹಾರ, ಜೀತ ವಿಮುಕ್ತಿ, ಎಲ್.ಜಿ. ಹಾವನೂರು ಆಯೋಗದ ವರದಿ ಅನುಷ್ಠಾನ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಿದರು. ವೃದ್ಧಾಪ್ಯ ವೇತನ ಹೀಗೆ ನಾನಾ ರೀತಿಯ ಚಾರಿತ್ರಿಕ ಕೆಲಸಗಳನ್ನು ಅರಸು ಕಾಲದಲ್ಲಿ ಜಾರಿಯಾಗಿವೆ ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ ಭಾವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಎಚ್. ಆನಂದ್ ಕುಮಾರ್ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿದ್ದು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು, ಪಿ.ಎಚ್‌ಡಿ ಪದವೀಧರರು ಸೇರಿ ಶೈಕ್ಷಣಿಕ ಸಾಧನೆ ಮಾಡಿದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಹಾಗೂ ಬಿಸಿಎಂ ಇಲಾಖೆ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರನ್ನು ಸನ್ಮಾನಿಸಲಾಯಿತು.
ಚ್ಯವನ ಪ್ರಾಶ ವಿತರಣೆ: ಆಯುಷ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚ್ಯವನ ಪ್ರಾಶ ವಿತರಿಸಲಾಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕೆಡಿಪಿ ಸದಸ್ಯ ವಿಜಯ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಉಪ ಕಾರ್ಯದರ್ಶಿ ಡಾ. ರಂಗಸ್ವಾಮಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮಾರಿಹಾಳ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್‌ಕುಮಾರ್, ಡಿಡಿಪಿಯು ಕೆ. ತಿಮ್ಮಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಯಾದವ್, ಪ್ರತಾಪ್‌ಜೋಗಿ, ರಾಮುಗೋಸಾಯಿ ಇತರರು ಇದ್ದರು.
ಡಿ.ಒ. ಮುರಾರ್ಜಿ ಕಲಾತಂಡ ಗೀತ ಗಾಯನ ನಡೆಸಿಕೊಟ್ಟಿತು. ಆಕಾಶವಾಣಿ ಡಾ. ನವೀನ್ ಮಸ್ಕಲ್ ನಿರೂಪಿಸಿದರು.
ಶೋಷಿತರು, ಹಿಂದುಳಿದವರಿಗೆ ಶಕ್ತಿ ತುಂಬಿದ ಅರಸು
ಭಾರತವಿಂದು ವಿಜ್ಞಾನ ತಂತ್ರಜ್ಞಾನದಲ್ಲಿ ಬಲ ಶಾಲಿಯಾಗಿದೆಯೆಂದರೆ ಅದಕ್ಕೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕಾರಣ ಹಾಗೆಯೇ ಶೋಷಿತರು, ಹಿಂದುಳಿದವರಿಗೆ ರಾಜಕೀಯವಾಗಿ ಶಕ್ತಿ ತುಂಬಿದ್ದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ. ಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಜೀವ್‌ಗಾಂಧಿ, ದೇವರಾಜ ಅರಸು ಅವರ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಅರಸು ಶೋಷಿತರ ಪರ ನಿಂತು ತಮ್ಮ ಆಡಳಿತಾವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದರು. ಅಂದು ಶೋಷಿತರ ಪರ ಕೆಲಸ ಮಾಡದಿದ್ದರೆ ನಾವುಗಳಿಂದು ಮಾತನಾಡಲು ಆಗುತ್ತಿರಲಿಲ್ಲ. ಚುನಾವಣೆ ಸಮಯದಲ್ಲಿ ಸಣ್ಣ, ಸಣ್ಣ ಸಮುದಾಯಗಳನ್ನು ಗುರುತಿಸಿ ಟಿಕೆಟ್ ಕೊಟ್ಟು ರಾಜಕೀಯವಾಗಿ ಬೆಳೆಯಲು ಪ್ರೋತ್ಸಾಹ ನೀಡಿದ್ದರು ಎಂದು ಸ್ಮರಿಸಿದರು.
ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ರಾಜೀವ್‌ಗಾಂಧಿ ಹಾಗೂ ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ. ರಾಜೀವ್‌ಗಾಂಧಿ ಪ್ರಧಾನಿಯಾಗಿದ್ದಾಗ ವಿರೋಧ ಲೆಕ್ಕಿಸದೆ ವಿಜ್ಞಾನ-ತಂತ್ರಜ್ಞಾನದಲ್ಲಿ ಭಾರತದೆಡೆ ಬಲಿಷ್ಠ ರಾಷ್ಟ್ರಗಳು ನೋಡುವಂತೆ ಮಾಡಿದರು. ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ್ದರು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ. ತಾಜ್‌ಪೀರ್, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ. ಕೃಷ್ಣಮೂರ್ತಿ, ಎಚ್. ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ ಮಾತನಾಡಿದರು. ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಕೆ.ಪಿ. ಸಂಪತ್‌ಕುಮಾರ್, ಅನಂತ್, ನಜ್ಮತಾಜ್, ಎಸ್.ಎನ್. ರವಿಕುಮಾರ್, ವಕೀಲರಾದ ಎಚ್.ಒ. ಜಗದೀಶ್‌ಗುಂಡೇರಿ, ಸುದರ್ಶನ್, ಮುನೀರಾಮಕಂದಾರ್, ಸೈಯದ್ ಮೊಹಿದ್ದೀನ್, ಮಂಜುನಾಥ್, ಎಚ್. ಅಂಜಿನಪ್ಪ, ಸಮರ್ಥರಾಯ್, ವಾಸೀಂ, ಪ್ರಕಾಶ್, ಶಶಿ, ಜಿ.ವಿ. ಮಧುಗೌಡ, ಎ. ಸಾಧಿಕ್‌ವುಲ್ಲಾ, ಶಬ್ಬೀರ್‌ಬಾಷ, ಚಾಂದ್‌ಪೀರ್, ರೇಣುಕ, ರಮೇಶ್ ಇತರರು ಇದ್ದರು.