ಸವದತ್ತಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನ ಆಚರಣೆ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಡಾ.ವೈ.ಎಂ.ಯಾಕೊಳ್ಳಿ, ಎಂ.ಎನ್.ಹೆಗ್ಗನ್ನವರ, ಮೋಹನ ದಂಡಿನ ಇತರರಿದ್ದರು. 
ಜಿಲ್ಲೆ

ಅರಸು ಆದರ್ಶ ಪಾಲನೆಯಾಗಲಿ

ಸವದತ್ತಿ: ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಿಸುವ ಜತೆಗೆ ಇನ್ನೂ ಹೆಚ್ಚಿನ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಅಲ್ಪಸಂಖ್ಯಾತರ, ದೀನದಲಿತರ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಗುರುಭವನದಲ್ಲಿ ತಾಲೂಕಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು 108ನೇ ಜನ್ಮದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಡವರ, ಶೋಷಿತರ ಏಳಿಗೆಗೆ ಶ್ರಮಿಸಿದ ಡಿ.ದೇವರಾಜ ಅರಸು ಅವರ ತತ್ತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದರು.
ಉಪನ್ಯಾಸಕ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿ, ಅರಸು ಮನೆತನದಲ್ಲಿ ಹುಟ್ಟಿದರೂ ಸಹ ಸಾಮಾನ್ಯ ರೈತನಾಗಿ ಬದುಕಿ, ಜೀತ ಪದ್ಧತಿ ನಿರ್ಮೂಲನೆಗೆ ಅರಸು ಶ್ರಮಿಸಿದರು. ಉಳುವವನೇ ಭೂ ಒಡೆಯ ಕಾಯ್ದೆ ಮೂಲಕ ನೊಂದ ರೈತರ ಧ್ವನಿಯಾಗಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿಕೊಟ್ಟರು. ಅರಸು ಅವರ ಜೀವನ ಎಲ್ಲರಿಗೂ ಮಾದರಿ ಎಂದರು.

ಶಾಸಕ ವಿಶ್ವಾಸ ವೈದ್ಯ ಅವರನ್ನು ಸತ್ಕರಿಸಲಾಯಿತು. ತಹಸೀಲ್ದಾರ್ ಎಂ.ಎನ್.ಹೆಗ್ಗನ್ನವರ, ಶಿಕ್ಷಣಾಧಿಕಾರಿ ಮೋಹನ ದಂಡಿನ, ರವೀಂದ್ರ ಯಲಿಗಾರ, ಪುರಸಭೆ ಮುಖ್ಯಾಧಿಕಾರಿ ಪಿ.ಎಂ.ಚನ್ನಪ್ಪನವರ, ಆರ್.ಎಸ್.ಪಾಟೀಲ, ವಿಜಯ ಸಂಗಪ್ಪಗೋಳ, ಮೈತ್ರಾದೇವಿ ವಸದ, ಸುನೀತಾ ಪಾಟೀಲ, ಬಸವರಾಜ ತಳವಾರ, ದ್ಯಾಮಣ್ಣ ಸುತಗಟ್ಟಿ ಇತರರು ಇದ್ದರು.