ಅರಸೀಕೆರೆ: ನಗರದ ದೊಡ್ಡ ಗಣಪತಿಯನ್ನು ಗ್ರಂಥಾಲಯ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಪೆಂಡಾಲ್‌ನಲ್ಲಿ ಸೋಮವಾರ ಮಧ್ಯಾಹ್ನ ಭಕ್ತರ ಜಯಘೋಷದೊಂದಿಗೆ ಪ್ರತಿಷ್ಠಾಪಿಸಲಾಯಿತು.
ಗರುಡನಗಿರಿ ರಸ್ತೆಯಲ್ಲಿರುವ ಕಲಾವಿದ ಹಾರನಹಳ್ಳಿ ಮಹದೇವ್ ಅವರ ನಿವಾಸದಿಂದ ಟ್ರ್ಯಾಕ್ಟರ್ ಮೂಲಕ ಸಕಲ ಮಂಗಳವಾದ್ಯಗಳೊಂದಿಗೆ ಪೇಟೆ ಬೀದಿ ಮೂಲಕ ಮಂಗಳವಾದ್ಯದೊಂದಿಗೆ ಪೆಂಡಾಲ್‌ಗೆ ತರಲಾಯಿತು. ಭಕ್ತ ಸಮೂಹದ ಜಯಘೋಷದ ನಡುವೆ ಭಕ್ತ ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು. ಚುನಾಯಿತ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಮುಖಂಡರು, ನಾಗರಿಕರು ಪಾಲ್ಗೊಂಡಿದ್ದರು. ಗಣೇಶ ಮೂರ್ತಿಯನ್ನು ಕರೆತರುವ ಮಾರ್ಗಮಧ್ಯೆ ರಸ್ತೆಗಳನ್ನು ರಂಗೋಲಿ ಹಾಕಿ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು.
ಮುತ್ತೈದೆಯರು ಆರತಿ ಮಾಡಿ ವಿನಾಯಕನನ್ನು ಸಂಭ್ರಮದಿಂದ ಬರಮಾಡಿಕೊಂಡರು. ಧಾರ್ಮಿಕ ವಿಧಿ, ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ 82 ದಿನ ಜರುಗಲಿದ್ದು ಕಂತೇನಹಳ್ಳಿ ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ಜರುಗಲಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.