ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಅಮೃತ ಭಾರತ್ ಯೋಜನೆಯಡಿ ಆಯೋಜಿಸಿದ್ದ ಸಮಾರಂಭವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ, ಸುರೇಶ್ ಉದ್ಘಾಟಿಸಿದರು. ಎಂ.ಜಿ.ಸಂತೋಷ್ ಕುಮಾರ್, ಸಿ.ಗಿರೀಶ್, ಇ.ವಿಜಯಾ ಇತರರು ಇದ್ದರು.  
ಜಿಲ್ಲೆ

ಅರಸೀಕೆರೆ ರೈಲ್ವೆ ನಿಲ್ದಾಣ ಉನ್ನತೀಕರಣಕ್ಕೆ ಯೋಜನೆ

ಅರಸೀಕೆರೆ: ಕೇಂದ್ರ ಸರ್ಕಾರ ದೇಶದ ಉದ್ದಗಲಕ್ಕೂ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಅನುದಾನ ನೀಡುತ್ತಿರುವುದು ಸ್ವಾಗತಾರ್ಹ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.


ಅಮೃತ ಭಾರತ ಯೋಜನೆಯಡಿ ಅರಸೀಕೆರೆ ಸೇರಿದಂತೆ ರಾಜ್ಯದ 13 ರೈಲು ನಿಲ್ದಾಣಗಳ ರೂಪಾಂತರ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲಿನ ತೆರಿಗೆ ಕೇಂದ್ರ ಸರ್ಕಾರಕ್ಕೆ ಹೋಗಲಿದ್ದು ಅಭಿವೃದ್ಧಿ ಕಾರ್ಯಗಳಿಗೆ ಮರು ಹಂಚಿಕೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅರಸೀಕೆರೆ ರೈಲು ನಿಲ್ದಾಣ ಒಳಗೊಂಡಂತೆ 508 ನಿಲ್ದಾಣಗಳ ಉನ್ನತೀಕರಣಕ್ಕೆ ಯೋಜನೆ ರೂಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.


ಲಕ್ಷ್ಮೀಪುರ ಬಡಾವಣೆಯಿಂದ ಕಾಳನಕೊಪ್ಪಲು, ಮಲ್ಲೇಶ್ವರ ಹಾಗೂ ಸುಬ್ರಹ್ಮಣ್ಯ ನಗರ ಬಡಾವಣೆಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ರೈಲ್ವೆ ಕೆಳಸೇತುವೆಗಳ ನಿರ್ಮಾಣ ಅತ್ಯಂತ ಕಳಪೆ ಹಾಗೂ ಅವೈಜ್ಞಾನಿಕವಾಗಿದ್ದು ಗುಣಮಟ್ಟ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಜನರಿಗೆ ತೊಂದರೆ ನೀಡಿದಲ್ಲಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.


ಬೇಲೂರು ಶಾಸಕ ಸುರೇಶ್ ಮಾತನಾಡಿ, ಬಾಣಾವರ-ಜಾವಗಲ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ಕೆಳ ಸೇತುವೆ ಬಳಿ ಭಾರಿ ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದು ಲೋಪ ಸರಿಪಡಿಸಬೇಕು. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಟೇಷನ್ ರಸ್ತೆಯನ್ನು ವಿಸ್ತರಣೆ ಮಾಡಿಸಲು ಶಾಸಕ ಶಿವಲಿಂಗೇಗೌಡರ ಮುಂದಾಗಬೇಕು ಎಂದು ಹೇಳಿದರು.


ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಸೀತಾಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ಎಡಿಆರ್‌ಎಂ ಇ.ವಿಜಯಾ, ವಿಭಾಗೀಯ ಹಿರಿಯ ಇಂಜಿನಿಯರ್ ರವಿಚಂದ್ರನ್, ಪ್ರಶಾಂತ್ ಮಸ್ತಿಹೋಳಿ, ಪಿಆರ್‌ಒ ಲೋಹಿತೇಶ್ವರ, ಸ್ಟೇಷನ್ ಮ್ಯಾನೇಜರ್ ಪಿ.ಕೆ.ಸಿಂಗ್, ಚಂದ್ರಶೇಖರ್, ಸುರೇಶ್, ವಾಣಿಜ್ಯ ನಿರೀಕ್ಷಕ ಅಂಬರೀಷ್, ಪೌರಾಯುಕ್ತ ಕೃಷ್ಣಮೂರ್ತಿ, ಮಜ್ದೂರ್ ಯೂನಿಯನ್ ಸಂಘಟಕ ರವಿಕುಮಾರ್, ಪ್ರಭು ಇತರರು ಇದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.